ಶ್ರೀರಂಗಪಟ್ಟಣ: ಕೆಆರ್‌ಎಸ್‌ನಿಂದ ಕಾವೇರಿ ಕಣಿವೆ ವ್ಯಾಪ್ತಿಯ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ವಿರುದ್ಧ ಘೋಷಣೆಗಳನ್ನು ಕೂಗಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ ವಿ.ಸಿ.ನಾಲೆ, ಸಿಡಿಎಸ್, ವಿರಿಜಾ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೃಷಿ ಭೂಮಿಗಳಲ್ಲಿ ರೈತರು ಬಿತ್ತನೆ ಕಾರ್ಯ ಆರಂಭ, ಪ್ರಸ್ತುತ ಇರುವ ವಾಣಿಜ್ಯ ಬೆಳೆಗಳನ್ನು ಉಳಿಸಲು ಮತ್ತು ಭೂಮಿಯಲ್ಲಿ ಅಂರ್ತಜಲಮಟ್ಟ ಹೆಚ್ಚಿಸಲು ಶೀಘ್ರ ಎಲ್ಲ ನಾಲೆಗಳಿಗೂ ನೀರು ಹರಿಸುವಂತೆ ನೀರಾವರಿ ಇಲಾಖೆಗೆ ಮನವಿ ಮಾಡಿದ್ದೆವು. ಈವರೆಗೂ ನೀರು ಬಿಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆಯ ರೈತಾಪಿ ಜನರ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ರೈತರ ಕ್ಲಿಷ್ಟಕರ ಪರಿಸ್ಥಿತಿ ತಿಳಿದಿದ್ದರೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ನಾಲೆ ಕಾಮಗಾರಿ ಗುತ್ತಿಗೆದಾರನ ಪರ ವಕಾಲತ್ತು ವಹಿಸಿ ನಿಂತಿದ್ದಾರೆ. ಒಂದು ವೇಳೆ ಇನ್ನೆರಡು ದಿನಗಳಲ್ಲಿ ಎಲ್ಲ ನಾಲೆಗಳಿಗೆ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ನೆರವಾಗದಿದ್ದಲ್ಲಿ ಜಿಲ್ಲೆಯ ಜನರು ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾಹನ ಸಂಚಾರ ತಡೆದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಟೌನ್ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಸಂಘಟನಾ ಕಾರ್ಯದರ್ಶಿ ಮಹಾಲಿಂಗು, ಸಂಚಾಲಕ ಹಳುವಾಡಿ ನಾಗೇಂದ್ರ, ಹೆಮ್ಮಿಗೆ ಕೃಷ್ಣ, ಮಾರಸಿಂಗನಹಳ್ಳಿ ತಿಮ್ಮೇಗೌಡ, ದರಸಗುಪ್ಪೆ ರವಿಲಕ್ಷ್ಮಣ, ಚಿಕ್ಕಂಕನಹಳ್ಳಿ ಪರಮೇಶ್, ಅಚ್ಚಪ್ಪನಕೊಪ್ಪಲು ರಮೇಶ್, ಸಿ.ಟಿ.ರಾಮಚಂದ್ರು, ಕೆ.ಪಿ.ಸ್ವಾಮಿಗೌಡ, ಹೊಸಹಳ್ಳಿ ಸ್ವಾಮಿ, ಹೆಬ್ಬಾಡಿಹುಂಡಿ ಸಿದ್ದೇಗೌಡ, ಪೈ.ನಾಗಣ್ಣ, ಶಿವರಾಜು ಇತರರಿದ್ದರು.