ಜಿಲ್ಲೆ

ಶಿಂಷಾ ನಾಲೆಗಳಿಗೆ ನೀರು ಹರಿಸಲು ಆಗ್ರಹ

ಕಿರಣ್ ಗೌಡ.ಜಿ

ಮದ್ದೂರು: ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘಟನೆಯ ಕಾರ್ಯಕರ್ತರು ಕೊಪ್ಪ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೊಪ್ಪ ಸಂತೆ ಮೈದಾನದ ಬಳಿ ಜಮಾವಣೆಗೊಂಡ ಸಂಘಟನೆಯ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಲೆಗಳಿಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿದರು.

ಮದ್ದೂರು-ಕೊಪ್ಪ ಮಾರ್ಗದ ರಸ್ತೆ ತಡೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ಥವ್ಯಸ್ಥಗೊಂಡು ಪ್ರಯಾಣಿಕರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು.

ಶಿಂಷಾ ನಾಲಾ ಅಚ್ಚಕಟ್ಟು ಪ್ರದೇಶದ ವಿ.ಸಿ.ನಾಲಾ ವ್ಯಾಪ್ತಿಯ ರೈತರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರಲ್ಲೆ ಎಲ್ಲೆಡೆ ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರು ಜನ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬರುವ ಜತೆಗೆ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಣೆ ಮಾಡಲು ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ಪ್ರಾಣಿ, ಪಕ್ಷಿಗಳಿಗೆ, ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿರುವುದಾಗಿ ದೂರಿದರು.

ರೈತರ ಹೆಸರೇಳಿ ಅಧಿಕಾರಕ್ಕೆ ಬರುವ ಸರ್ಕಾರಗಳು ಬಳಿಕ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕೆರಗೋಡು ಬ್ರಾೃಂಚ್‌ನಿಂದ ಕಲ್ಮಂಟಿದೊಡ್ಡಿ ನಾಲೆಯ ಮೂಲಕ ಕೊಪ್ಪದ ಕೆರೆಯನ್ನು ತುಂಬಿಸಿ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣವೇ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೊಪ್ಪ ಎಇಇ ಕಿರಣ್‌ಕುಮಾರ್ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸುವ ಸಂಬಂಧ ಮೇಲಾಧಿಕಾರಿಗಳೊಟ್ಟಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಒಂದು ವಾರದೊಳಗಾಗಿ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಕೆರಗೋಡು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಸೋ.ಶಿ.ಪ್ರಕಾಶ್, ಅಂದಾನಿ, ಪ್ರಭುಲಿಂಗ, ಚನ್ನಪ್ಪ, ವೆಂಕಟೇಶ್, ರಾಮಣ್ಣ, ಉಮೇಶ್, ಜಗದೀಶ್ ನೇತೃತ್ವ ವಹಿಸಿದರು.