ಕಳೆದ ವರ್ಷ ದೀಪಾವಳಿ ಅಮಾವಾಸ್ಯೆಯಂದು ಹನೂರಿನಿಂದ ಪ್ರತ್ಯೇಕ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ಖಾಸಗಿ ಬಸ್ ನಿಲ್ದಾಣದಲ್ಲಿ ಭಕ್ತರು ಬಸ್‌ಗಾಗಿ ಕಾದು ನಿಂತಿದ್ದರು. 
ಜಿಲ್ಲೆ

ಹನೂರಿನಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರದಿಂದ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಗೆ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಒದಗಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಮ.ಬೆಟ್ಟದಲ್ಲಿ ಅ.29 ರಂದು ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ನೆವೇರಿಸುವುದರ ಮೂಲಕ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 30 ರಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿವಿಧ ಉತ್ಸವಗಳು, 31ರಂದು ನರಕ ಚತುರ್ದಶಿ ಪ್ರಯುಕ್ತ ವಿಶೇಷ ಉತ್ಸವಗಳು ಜರುಗಲಿವೆ. ನ.1ರಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹಾಲರುವೆ ಉತ್ಸವ, 2 ರಂದು ಬೆಳಗ್ಗೆ 7.50 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವವು ಜರುಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಹಾಗಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸಾರಿಗೆ ಇಲಾಖೆ ಪ್ರತಿನಿತ್ಯ ಸಂಚರಿಸುವ 106 ಬಸ್‌ಗಳ ಜತೆಗೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ಇನ್ನಿತರೆ ಕಡೆಗಳಿಂದ ಮ.ಬೆಟ್ಟಕ್ಕೆ 300 ಹೆಚ್ಚುವರಿ ಬಸ್‌ಗಳನ್ನು ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ತಾಲೂಕು ಕೇಂದ್ರವಾದ ಹನೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿದ್ದರೂ ಈವೆರಗೂ ಇಲ್ಲಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಿಲ್ಲ.

ಈ ಜಾತ್ರೆಗೆ ಹನೂರು ಸೇರಿದಂತೆ ಒಡೆಯರಪಾಳ್ಯ, ಪಿ.ಜಿ. ಪಾಳ್ಯ, ಶಾಗ್ಯ ಹಾಗೂ ಭಾಗದ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ತೆರಳುತ್ತಾರೆ. ಆದರೆ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯವಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ನಿಂತು ಕೊಳ್ಳೇಗಾದಿಂದ ಆಗಮಿಸುವ ಬಸ್‌ನಲ್ಲಿ ನೂಕು ನುಗ್ಗಲಿನಲ್ಲೇ ತೆರಳಿ ನಿಂತುಕೊಂಡೇ ಈ ಭಾಗದ ಭಕ್ತರು ಪ್ರಯಾಣಿಸಬೇಕಿದೆ. ಕೆಲ ಭಕ್ತರು ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಭಕ್ತರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

ಹನೂರಿನಿಂದ ಬಸ್ ಬಿಡುವಂತೆ ಒತ್ತಾಯ: ಮ.ಬೆಟ್ಟದಲ್ಲಿ ನಡೆಯುವ ವಿವಿಧ ಜಾತ್ರಾ ಮಹೋತ್ಸವದ ವೇಳೆ ಹನೂರು ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಾರೆ. ಜತೆಗೆ ಶಕ್ತಿ ಯೋಜನೆಯಿಂದಾಗಿ ಮ.ಬೆಟ್ಟಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಮ.ಬೆಟ್ಟಕ್ಕೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ ಕ್ಷೇತ್ರದ ಆರಾಧ್ಯ ದೈವ ಮಾದಪ್ಪನನ್ನು ಪೂಜಿಸುವ ಭಕ್ತರಿಗೆ ಮಾತ್ರ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಇಲ್ಲದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಈ ಭಾಗದ ಭಕ್ತರು ಮ.ಬೆಟ್ಟಕ್ಕೆ ತೆರಳಬೇಕಾದರೆ ತುಂಬಾ ತೊಂದರೆ ಪಡುವಂತಾಗಿದೆ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಇನ್ನಾದರೂ ಗಮನಹರಿಸಿ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸುವುದರ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹನೂರು ತಾಲೂಕು ಕೇಂದ್ರ. ಇಲ್ಲಿ ಬಸ್ ನಿಲ್ದಾಣ ಸ್ಥಾಪನೆಯಾಗಿ ಐದಾರು ವರ್ಷವೇ ಕಳೆದಿದೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಸಮರ್ಪಕ ಬಸ್ ಸೌಕರ್ಯವಿಲ್ಲ. ಇತ್ತ ಕ್ಷೇತ್ರದ ಆರಾಧ್ಯ ದೈವ ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ಅಮಾಮಾಸ್ಯೆ ಹಾಗೂ ಇನ್ನಿತರೆ ಜಾತ್ರಾ ಸಂದರ್ಭಗಳಲ್ಲಿ ಹನೂರು ಭಾಗದಿಂದ ಹೆಚ್ಚಿನ ಭಕ್ತರು ತೆರಳುತ್ತಾರೆ. ವಿವಿಧ ಕಡೆಗಳಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತದೆ. ಆದರೆ ಹನೂರಿನಿಂದ ಪ್ರತ್ಯೇಕ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಈ ಭಾಗದ ಭಕ್ತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇನ್ನು ಮುಂದಾದರೂ ಇತ್ತ ಗಮನಹರಿಸಿ ಹನೂರಿನಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಬೇಕು.

* ನಂದೀಶ್, ಹನೂರು ನಿವಾಸಿ