ದೊಡ್ಡಬಳ್ಳಾಪುರ : ನಿವೇಶನ ರಹಿತ ಕಡುಬಡವ ಫನಾನುಭವಿಗಳನ್ನು ಗುರುತಿಸಿ ನಿವೇಶನ ಮಂಜೂರು ಮಾಡುವುದು, ಸೂರಿಲ್ಲದವರಿಗೆ ಮನೆ ಮಂಜೂರು ಮಾಡುವುದು, ಬಡ ರೈತರಿಗೆ ಸಾಗುವಳಿ ಚೀಟಿಗಳನ್ನು ತಾಲೂಕು ಆಡಳಿತ ಶೀಘ್ರ ನೀಡಬೇಕು ಎಂದು ಜನಪರ ಒಕ್ಕೂಟಗಳ ಅಧ್ಯಕ್ಷ ಜಿ.ನಂಜುಂಡಪ್ಪ ಆಗ್ರಹಿಸಿದರು.
ತಾಲೂಕು ಕಚೇರಿ ಮುಂದೆ ಬುಧವಾರ ಜನಸಾಮಾನ್ಯರ ವಸತಿ, ಭೂಮಿ ವಂಚಿತರ ಒಕ್ಕೂಟ ಡಾ.ಅಂಬೇಡ್ಕರ್, ಬಸವಣ್ಣ, ಬಾಬುಜಗಜೀವನ್ ರಾಮ್ ಒಕ್ಕೂಟ, ಜನಪರ ಹೋರಾಟಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ವಾಸಿಸುತ್ತಿದ್ದಾರೆ. ಹಲವು ಭಾಗದಲ್ಲಿ ವಸತಿ ಇಲ್ಲದೆ ಒಂದೇ ಗುಡಿಸಲಿನಲ್ಲಿ 5 ರಿಂದ 10 ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅರ್ಹರಿಗೆ ಸರ್ಕಾರ ನೀಡುವುದಿಲ್ಲ ಬದಲಾಗಿ ಮಠ, ದೇವಾಲಯ, ಟ್ರಸ್ಟ್ಗಳಿಗೆ ಹಾಗೂ ಉಳ್ಳವರಿಗೆ ಸರ್ಕಾರಿ ಜಾಗ ನೀಡಲು ಆದೇಶ ನೀಡುತ್ತದೆ. ಆದರೆ ನಿರಾಶ್ರಿತರಿಗೆ ಕನಿಷ್ಟ ನಿವೇಶನ ಮಂಜೂರು ಮಾಡಲು ಹಿಂದೇಟು ಹಾಕುತ್ತದೆ. ಮತ್ತೊಂದೆಡೆ ಬಡ ರೈತರಿಗೆ ಸಾಗುವಳಿ ಚೀಟಿಗೆ ಅರ್ಹರಿದ್ದರೂ ಹತ್ತಾರು ವರ್ಷಗಳಿಂದ ವಿತರಣೆ ಮಾಡಿಲ್ಲ, ಶೀಘ್ರ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ಹಕ್ಕೋತ್ತಾಯಗಳು : 1. ನಿರಾಶ್ರಿತರಿಗೆ ವಸತಿಗಾಗಿ ಸರ್ಕಾರ ಕೂಡಲೇ ಜಮೀನು ನೀಡಬೇಕು. 2. ಸರ್ಕಾರ ನಿರ್ಮಿಸಿರುವ ಬಡಾವಣೆಗಳಲ್ಲಿ ನಿರಾಶ್ರಿತರನ್ನು ಕಡೆಗಣಿಸಿ ಉಳ್ಳವರಿಗೆ ನೀಡಿರುವುದನ್ನು ಹಿಂಪಡೆಯಬೇಕು. 3. ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು. 4. ಉಳ್ಳವರು ಉಪಯೋಗಿಸುತ್ತಿರುವ ಸರ್ಕಾರಿ ಸ್ವತ್ತುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಬೇಕು. 5. ಅತಿ ಸಣ್ಣ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. 6. ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು. 7. ಹೋರಾಟಗಾರರಿಗೆ ಮಾಸಿಕ ಮಾಶಾಸನ ನೀಡಲು ಕ್ರಮ ಜರುಗಿಸಬೇಕು.