ಜಿಲ್ಲೆ

ಬೌದ್ಧ ಮಹಾವಿಹಾರದ ಆಡಳಿತ ನೀಡಲು ಆಗ್ರಹ

ಆರ್.ಕೃಷ್ಣ

ಮೈಸೂರು: ಬಿಹಾರದ ಬುದ್ಧಗಯಾದಲ್ಲಿರುವ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಬುದ್ಧಿಸ್ಟ್ ಫೆಡರೇಷನ್‌ನಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಬಿಟಿ ಆಕ್ಟ್ 1947 ಅನ್ನು ರದ್ದುಗೊಳಿಸಿ, ಮಹಾಬೋಧಿ ಮಹಾವಿಹಾರ ಆಡಳಿತವನ್ನು ಬುದ್ಧರಿಂದ ನೀಡುವಂತೆ ದೇಶಾದ್ಯಂತ ಪ್ರತಿಭಟನಾ ರ‌್ಯಾಲಿ ಆಯೋಜಿಸಲಾಗಿತ್ತು.

ರಾಜ್ಯದ ವಿವಿಧ ಬೌದ್ಧಸಂಘ-ಸಂಸ್ಥೆಗಳು, ಬುದ್ಧ ವಿಹಾರಗಳು, ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ, ಬೆಸ್ಟ್ ಬೋಧಿಸತ್ವ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಟ್ರಸ್ಟ್, ಕರ್ನಾಟಕ ಬುದ್ಧಧಮ್ಮ ಸಮಿತಿಗಳ ಒಕ್ಕೂಟದಿಂದ ಸಿದ್ಧಾರ್ಥನಗರದಲ್ಲಿರುವ ಭಗವಾನ್ ಬುದ್ಧ ವೃತ್ತದಲ್ಲಿ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಸಂವಿಧಾನದ ಪೀಠಿಕೆ ಬೋಧಿಸಿದ ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಾಯಿತು.

ಬುದ್ಧಗಯಾದ ಬೌದ್ಧ ಮಹಾವಿಹಾರದ ಆಡಳಿತವನ್ನು ಮನುವಾದಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಕುತಂತ್ರದಿಂದ ಒಳನುಗ್ಗಿ ಆಡಳಿತ ನಡೆಸುತ್ತಿರುವುದು ಸರಿಯಲ್ಲ. ಬಿಹಾರದ ಸರ್ಕಾರ ಬೌದ್ಧರ ಪರವಾಗಿ ನಿಂತಿಲ್ಲ. ಬೌದ್ಧ ವಿರೋಧಿಗಳಾದ ಮನುವಾದಿಗಳು, ಬ್ರಾಹ್ಮಣರು ಆಡಳಿತ ನಡೆಸುತ್ತಿದ್ದು, ಇವರನ್ನು ಅಲ್ಲಿಂದ ಹೊರಹಾಕಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿದರು.

ಬೌದ್ಧ ವಿಹಾರದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಮಾಡಿ ಬೌದ್ಧರಿಗೆ ಅಪಮಾನ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂ ಆಡಳಿತದಿಂದ ಕೊನೆಗಾಣಿಸಿ ಬೌದ್ಧರಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬಾಬಾ ಸಾಹೇಬರು ದೇಶವನ್ನು ಹೊಸದಾಗಿ ಕಟ್ಟಬೇಕೆಂದು ಸಂವಿಧಾನ ನೀಡಿದರು. ಈ ಮೂಲಕ ಭಾರತದ ಮೂಲ ನಿವಾಸಿಗಳಿಗೆ ಬೌದ್ಧ ಧರ್ಮದ ಮಾರ್ಗ ತೋರಿಸಿಕೊಟ್ಟರು. ಆದರೆ, ಇಂದು ಪುರೋಹಿತಶಾಹಿವರ್ಗ, ಬ್ರಾಹ್ಮಣರು ಬುದ್ಧಗಯಾ ಮಹಾವಿಹಾರದಲ್ಲಿ ಆಡಳಿತ ನಡೆಸುತ್ತಿರುವುದು ಶೋಚನಿಯ ಸಂಗತಿ. ಹೀಗಾಗಿ, ಇನ್ನಾದರೂ ಬುದ್ಧ, ಬಾಬಾಸಾಹೇಬರ ಅನುಯಾಯಿಗಳು ಎಚ್ಚೆತ್ತುಕೊಂಡು ಬುದ್ಧಗಯಾದ ಬುದ್ಧವಿಹಾರದ ಆಡಳಿತವನ್ನು ಬೌದ್ಧರಿಗೆ ವಹಿಸುವಂತೆ ಒತ್ತಾಯಿಸಿ ಹೋರಾಟ ನಡೆಸಬೇಕಿದೆ ಎಂದು ಆಗ್ರಹಿಸಿದರು.

ಮಾಜಿ ಮೇಯರ್ ಪುರುಷೋತ್ತಮ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಚಿಂತಕ ಆರ್.ಮಹದೇವಪ್ಪ, ಸಿದ್ದಾರ್ಥ ಬುದ್ಧ ವಿಹಾರದ ಚಂದ್ರಮಣಿ ಬಂತೇಜಿ, ಸಾಹಿತಿ ಸಿದ್ದಸ್ವಾಮಿ, ಮಲೆಯೂರು ಸೋಮಯ್ಯ, ಹೋರಾಟಗಾರ ಚೋರನಹಳ್ಳಿ ಶಿವಣ್ಣ, ಆರ್.ನಟರಾಜು, ಎಚ್.ಶಿವರಾಜು, ಎಂ.ಸಾವಕಯ್ಯ, ರಾಜು ಅಂಪಾಪುರ, ನಿಸರ್ಗ ಸಿದ್ದರಾಜು, ಕೆ.ಎಂ.ಪುಟ್ಟು, ಹರಕುಮಾರ್, ಈರೇಶ್ ನಗರ್ಲೆ, ಡಾ.ಜಗನ್ನಾಥ್, ಮಹಾದೇವಸ್ವಾಮಿ, ಪುಟ್ಟಸ್ವಾಮಿ, ಗೋವಿಂದರಾಜು, ಪಲ್ಲವಿ, ಅಂತರಸಂತೆ ಮಂಚಯ್ಯ, ರೂಪೇಶ್, ಪುನೀತ್, ವಿಜಯಾಕುಮಾರ್, ಸಚಿನ್ ಇತರರು ಇದ್ದರು.