ಎಚ್.ಡಿ.ಕೋಟೆ: ಜಮೀನಿಗೆ ಓಡಾಡಲು ರಸ್ತೆ ಕಲ್ಪಿಸುವಂತೆ ಹಲವು ಬಾರಿ ತಹಸೀಲ್ದಾರ್ ಅವರಿಗೆ ಅರ್ಜಿ ಕೊಟ್ಟಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ತಹಸೀಲ್ದಾರ್ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ರೈತ ಉಮೇಶ್, ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.
ತಾಲೂಕಿನ ಕಸಬಾ ಹೋಬಳಿಯ ವಡ್ಡರಗುಡಿ ಗ್ರಾಮದ ಸರ್ವೇ ನಂ.17ರಲ್ಲಿ ವೆಂಕಟಮ್ಮ ಕೋಂ ವೆಂಕಟೇಶಯ್ಯ ಅವರ ಹೆಸರಲ್ಲಿ 4 ಎಕರೆ ಜಮೀನಿದ್ದು, ರಸ್ತೆ ಗುರುತಿಸುಂತೆ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಒಂದು ವರ್ಷದ ಹಿಂದೆ ಅರ್ಜಿ ನೀಡಿ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಪಕ್ಕದ ಜಮೀನಿನ ಮಾಲೀಕರಾದ ಚಾಲ್ಲವೆಂಕಟರಮಣ ಅವರಿಗೆ ಸೇರಿದ 3 ಎಕರೆ ಇದ್ದು, ಈ ಜಮೀನಿನ ಪಕ್ಕ ಹೆಬ್ಬಾಳ ಜಲಾಶಯಕ್ಕೆ ಬಂಡಿ ದಾರಿಯಿದೆ. ಬಿ.ಬೆಳತ್ತೂರು ಕಾಲನಿ ಗ್ರಾಮಸ್ಥರು, ಅಕ್ಕ-ಪಕ್ಕ ಜಮೀನಿನ ರೈತರು ಈ ದಾರಿಯನ್ನು ಬಳಸುತ್ತಿದ್ದಾರೆ. ಜತೆಗೆ ಸಾರ್ವಜನಿಕರೂ ಬಳಸುತ್ತಿದ್ದು, ಈಗ ಏಕಾಏಕಿ ಜಮೀನಿನ ಮಾಲೀಕರು ಗೇಟ್ ಅಳವಡಿಸಿ ಸುತ್ತ ತಂತಿ ಬೇಲಿ ಹಾಕಿದ್ದಾರೆ. ಇದರಿಂದ ನಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದ ಕಾರಣ ಒಂದು ವರ್ಷದಿಂದ ಹಲವು ಬಾರಿ ಅರ್ಜಿ ಕೊಟ್ಟಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರತಿಭಟನಾ ಸ್ಥಳಕ್ಕೆ ಹುಣಸೂರು ಉಪ ವಿಭಾಗಾಧಿಕಾರಿ ಬಂದು ಸಮಸ್ಯ ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು.
ರೈತನ ಏಕಾಂಗಿ ಹೋರಾಟಕ್ಕೆ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಕೀಲರಾದ ಚೌಡಹಳ್ಳಿ ಜವರಯ್ಯ, ದಸಂಸ ಸಮೀರ್, ಸತ್ತರ್ ಪಾಷ, ಮಹಾಲಿಂಗಯ್ಯ, ರವಿ ಇದ್ದರು.