ಜಿಲ್ಲೆ

ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ


ಮೈಸೂರು:
ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯ ನಿರ್ಮೂಲನೆಗೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ಮಹಿಳೆಯರು, ಮಕ್ಕಳ ಮೇಲೆ ಸಮಾಜದಲ್ಲಿ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ವಿಶ್ವಸಂಸ್ಥೆಯ ವರದಿ ಮತ್ತು ಭಾರತದ ಕ್ರೈಮ್ ರೆಕಾರ್ಡ್ ಬ್ಯುರೋ ವರದಿಗಳು ಬೆಚ್ಚಿಬೀಳಿಸುವಂತ್ತಿವೆ. ತನ್ನವರಿಂದಲೇ ಮಹಿಳೆಗೆ ಅಪಾಯವಿರುವ ಭೀಕರತೆಯನ್ನು ಈ ವರದಿಗಳು ಅನಾವರಣಗೊಳಿಸಿವೆೆ. ಇದರ ವಿರುದ್ಧ ಇಡೀ ಸಮಾಜ ಎಚ್ಚರಗೊಳ್ಳಬೇಕಿದೆ ಎಂದರು.

ನ್ಯಾಯಮೂರ್ತಿ ವರ್ಮಾ ಆಯೋಗದ ಎಲ್ಲ ಶಿಫಾರಸುಗಳನ್ನು ಜಾರಿ ಮಾಡಬೇಕು. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಮಹಿಳೆಯರು ಬ್ಯಾಂಕ್, ಮೈಕ್ರೋ ಫೈನಾನ್ಸ್ ಹಾಗೂ ಧರ್ಮಸ್ಥಳ ಕಿರುಸಾಲ ಸಂಸ್ಥೆಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪೆಟ್ರೋಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಹಿಳಾ ಮಸೂದೆ ಜಾರಿಗೆ ತರಬೇಕು. ಆದಾಯ ತೆರಿಗೆದಾರರನ್ನು ಹೊರತುಪಡಿಸಿ ಎಲ್ಲರಿಗೂ ಪಡಿತರ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಆಶಾ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಕಾರ್ಯದರ್ಶಿ ಸುನೀತಾ, ಕಾರ್ಯದರ್ಶಿ ಪ್ರೀತಿ, ರಂಜಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.