ಜಿಲ್ಲೆ

ಕನ್ನಡಿಗರಿಗೆ ಉದ್ಯೋಗ ವಿಧೇಯಕ ಅಂಗೀಕರಿಸಿ: ಕನ್ನಡ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಕನ್ನಡಿಗರಿಗೆ ಉದ್ಯೋಗ ಮೀಸಲು ವಿಧೇಯಕ ಮಂಡನೆ ಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಬೇಕೆಂದು ಕನ್ನಡ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಆಗ್ರಹಿಸಿದರು.

ರಾಜ್ಯದ ಎಲ್ಲ ಖಾಸಗಿ ಕೈಗಾರಿಕೆಗಳಲ್ಲಿನ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡಲು ರಾಜ್ಯ ಸರ್ಕಾರ ವಿಧೇಯಕ ಮಂಡಿಸಿರುವುದು ಸ್ವಾಗತಾರ್ಹ. ಆದರೆ, ಇದಕ್ಕೆ ಖಾಸಗಿ ಕಂಪನಿಗಳ ಮಾಲೀಕರ ವಿರೋಧ ಸಲ್ಲದು. ಅಂತೆಯೇ ಕಾಪೋರೇಟ್ ವಲಯದ ಸಮಾಜಘಾತುಕ ಶಕ್ತಿಗಳಿಗೆ ಧೃತಿಗೆಡಬಾರದು. ಸರ್ಕಾರದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದು ಸಾಮಾನ್ಯ ಜನರೇ ಹೊರತು, ಕಾರ್ಪೋರೇಟ್ ಕಂಪನಿಗಳ ಮಾಲೀಕರಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕ ಅಂಗೀಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲು ವಿಧೇಯಕಕ್ಕೆ ವಿರೋಧಿಸುವುದು ಸರಿಯಲ್ಲ. ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ಇಲ್ಲೇ ನೆಲೆ ನಿಂತು ಕೈಗಾರಿಕೆಗಳನ್ನು ಸ್ಥಾಪಿಸುವ ಹಾಗೂ ಇಲ್ಲಿನ ನೀರು, ಭೂಮಿ ಮತ್ತು ಸಂಪನ್ಮೂಲಗಳನ್ನು ಬಳಸುವವರಿಗೆ ಕನ್ನಡಿಗ ಕಾರ್ಮಿಕರು ಮಾತ್ರ ಬೇಕಿಲ್ಲ. ಇದು ಏಕೆ ಎಂದು ಪ್ರಶ್ನಿಸಿದ ಅವರು, ನೆರೆ ರಾಜ್ಯದ ಉದ್ಯಮಿಗಳು, ಕೆಲವು ಕಾರ್ಪೋರೇಟ್ ವಲಯದ ಪ್ರಚಾರ ಪ್ರಿಯ ಉದ್ಯಮಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಖಾಸಗಿ ವಲಯದ ಮಾಲೀಕರು, ಕಾರ್ಪೋರೇಟ್ ವ್ಯಾಪ್ತಿಗಳು ಕರ್ನಾಟಕಕ್ಕೆ ಬರುವುದೇ ಇಲ್ಲಿನ ಭೌಗೋಳಿಕ ವಾತಾವರಣ, ಇಲ್ಲಿನ ಜನರ ಹೃದಯ ವೈಶಾಲ್ಯತೆ ಮತ್ತು ಇಲ್ಲಿ ದೊರೆಯುವ ಸಂಪನ್ಮೂಲಗಳ ಕಾರಣಕ್ಕಾಗಿ ಎಂದು ಹೇಳಿದರು.

ಕರ್ನಾಟಕಕ್ಕೆ ಬಂದು ವ್ಯಾಪಾರ ಮಾಡುವ, ಕೈಗಾರಿಕೆಗಳನ್ನು ನಡೆಸುವವರು ಈ ನೆಲದ ಭಾಷೆ, ಸಂಸ್ಕೃತಿ, ಜನರ ಬದುಕು ಮತ್ತು ಕಾನೂನನ್ನು ಗೌರವಿಸುವುದನ್ನು ಕಲಿಯಬೇಕು. ಕನ್ನಡಿಗರ ಉದ್ಯೋಗ ಮೀಸಲಿಗೆ ಇನ್ನು ಮುಂದೆ ವಿರೋಧ ವ್ಯಕ್ತಪಡಿಸಿದರೆ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ಕಾಪೋರೇಟ್ ವಲಯದ ಮಾಲೀಕರನ್ನು ಹೇಗೆ ವಿರೋಧಿಸುವುದು ಎಂಬುದು ನಮಗೆ ಗೊತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸಂಘಟನೆಯ ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಕಾರ್ಯಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕಮ್ಮನಾಯಕನಹಳ್ಳಿ ಮಂಜು, ಮಂಡ್ಯ ತಾಲೂಕು ಅಧ್ಯಕ್ಷ ಸತೀಶ್ ಸೂನಗಹಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೌಭಾಗ್ಯಾ ಶಿವಲಿಂಗು ಹಾಜರಿದ್ದರು.