ಜಿಲ್ಲೆ

ರಾಜ್ಯದಲ್ಲಿ ಮ್ಯಾಂಗ್ರೋವ್ ಸೆಲ್ ತೆರೆಯಲು ಆಗ್ರಹ

Mangaluru - Shravan Kumar Nala

ಮಂಗಳೂರು: ಮ್ಯಾಂಗ್ರೋವ್ ಅರಣ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ ಮ್ಯಾಂಗ್ರೋವ್ ಸೆಲ್ (ಕೋಶ) ತೆರೆಯಬೇಕು ಎಂದು ಸೊಸೈಟಿ ಫಾರ್ ಫಾರೆಸ್ಟ್ ಎನ್‌ವಿರಾನ್‌ಮೆಂಟ್ ಆಂಡ್ ಕ್ಲೆ ಮೆಟ್ ಚೇಂಜ್ (ಎಸ್‌ಎಫ್‌ಇಸಿಸಿ) ಆಗ್ರಹಿಸಿದೆ.

ಅರಣ್ಯ ಇಲಾಖೆಯ ರೀತಿಯಲ್ಲೇ ಮ್ಯಾಂಗ್ರೋವ್ ಇಲಾಖೆ ನಿರ್ಮಾಣ ಆಗಬೇಕು. ಇದನ್ನು ಪರಿಣಾಮಕಾರಿಯಾಗಿಸಲು ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಪಶ್ಚಿಮಘಟ್ಟ ಅಪಾಯದ ಸ್ಥಿತಿಯಲ್ಲಿದ್ದು, ಅಲ್ಲಿ ನಡೆಯುತ್ತಿರುವ ಅನಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಎಸ್‌ಎಫ್‌ಇಸಿಸಿ ಕಾರ್ಯದರ್ಶಿ ಬೆನೆಡಿಕ್ಟ್ ಫೆನಾರ್ಂಡಿಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪರಿಸರ ಕಾರ್ಯಕರ್ತ ಹರ್ಷ್ ಯಾದವ್ ಮಾತನಾಡಿ, ಮಹಾರಾಷ್ಟ್ರ ರಾಜ್ಯವು 720 ಕಿ..ಮೀ. ಕರಾವಳಿಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಮ್ಯಾಂಗ್ರೋವ್‌ಗಳ ನಿರಂತರ ನಾಶದಿಂದಾಗಿ, 2005ರಲ್ಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿ, ಮ್ಯಾಂಗ್ರೋವ್‌ಗಳ ನಾಶ ನಿಷೇಸಿತು. 2008ರಲ್ಲಿ ಮ್ಯಾಂಗ್ರೋವ್ ಅರಣ್ಯಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಿತು. 2012ರಲ್ಲಿ ಮಹಾರಾಷ್ಟ್ರ ಸರ್ಕಾರವು ಅರಣ್ಯ ಇಲಾಖೆಯಡಿಯಲ್ಲಿ ಮ್ಯಾಂಗ್ರೋವ್ ಕೋಶವನ್ನು ಸ್ಥಾಪಿಸಿತು, ಇದು ಮಹಾರಾಷ್ಟ್ರದ ಮ್ಯಾಂಗ್ರೋವ್‌ಗಳ ಸಂರಕ್ಷಣೆಗೆ ಕ್ರಮಗಳಿಗೆ ನಾಂದಿಯಾಯಿತು ಎಂದರು.

ಪರಿಸರ ಕಾರ್ಯಕರ್ತ ಸಿದ್ದೇಶ್ ಮಾತನಾಡಿ, ಕರ್ನಾಟಕವು 320 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿದ್ದು, 300 ಹೆಕ್ಟೇರ್ ಮ್ಯಾಂಗ್ರೋವ್ ಅರಣ್ಯವನ್ನು ಹೊಂದಿರುವ ಅದ್ಭುತ ಸಸ್ಯ, ಪ್ರಾಣಿ ಮತ್ತು ಕರಾವಳಿ ಸಮುದಾಯಗಳನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದೆ. ಕರಾವಳಿ ಪರಿಸರ ವ್ಯವಸ್ಥೆಗಳ ಸಂರಕ್ಷಣೆಯು ಹೆಚ್ಚುತ್ತಿರುವ ಸಮುದ್ರ ಮಟ್ಟಗಳ ಮುಖಾಂತರ ಕರ್ನಾಟಕದ ಭದ್ರತೆ ಮತ್ತು ಸ್ಥಿರತೆಗೆ ಬಹುಮುಖ್ಯವಾಗಿದೆ. ಕರ್ನಾಟಕದಲ್ಲಿಯೂ ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸಿ ಮ್ಯಾಂಗ್ರೋವ್‌ಗಳು ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ವಿಶೇಷ ಮ್ಯಾಂಗ್ರೋವ್ ಸೆಲ್ ಅನ್ನು ಸ್ಥಾಪಿಸಬೇಕು ಎಂದರು.

ಪರಿಸರ ಪರ ಕಾರ್ಯಕರ್ತರಾದ ಜೀತ್ ಮಿಲನ್ ರೋಚ್, ಭುವನ್ ದೇವಾಡಿಗ ಮತ್ತು ದಿಲೀಪ್ ವಾಸ್ ನಾಯಕ್ ಉಪಸ್ಥಿತರಿದ್ದರು.