ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಸಿಯೂಟ ಕಾರ್ಮಿಕರಿಗೆ ಗೌರವಧನ ಹೆಚ್ಚಿಸುವುದು, ಬಾಕಿ ಗೌರವಧನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಅಪೌಷ್ಟಿಕತೆ ನೀಗಿಸಲು ಬಿಸಿಯೂಟ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ. ರಾಜ್ಯದಲ್ಲಿ ಅಡುಗೆಯವರು 47,250, ಅಡುಗೆ ಸಹಾಯಕರಾಗಿ 71,336 ಸೇರಿ ಒಟ್ಟಾರೆ 1,18,586 ಬಿಸಿಯೂಟ ತಯಾರಕರು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸಕಾಲಕ್ಕೆ ವೇತನ ಪಾವತಿಸುತ್ತಿಲ್ಲ ಎಂದು ದೂರಿದರು.
ಅಡುಗೆ ತಯಾರಕರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್ಐ, ನಿವೃತ್ತಿ ಪಿಂಚಣಿ, ಹೆರಿಗೆ ರಜೆ, ಗುರುತಿನ ಚೀಟಿ ಇತರ ಸೌಲಭ್ಯ ನೀಡಬೇಕು. ಸಮಯ ಮತ್ತು ಕಾರ್ಯಪಾಲನೆ ಬಗ್ಗೆ ಸ್ಪಷ್ಟ ಆದೇಶ ನೀಡಿ ಜಾರಿಗೆ ತರಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಎ. ಶಾಂತಾ, ಭುವನಾ ಬಳ್ಳಾರಿ, ಉಮಾ ಹಿರೇಮಠ, ಗೌರಮ್ಮ ಗುಡ್ಡದಮನಿ, ಲಲಿತಾ ಹೊಸಮನಿ, ರೇಣುಕಾ ಕರಿಗಾರ, ಜಾಹಿದಾ ಹೊಂಬಳ, ಮಾಲತಿ ಮುಗಳಿ, ರಾಜಮ್ಮ ಕುಂದಗೋಳ, ಕುತೇಜಾ, ರತ್ನಾ ಕಂಬಾರ, ಇತರರು ಇದ್ದರು.