ತಿ.ನರಸೀಪುರ: ಸುಪ್ರೀಂಕೋರ್ಟ್ ಆದೇಶದಂತೆ ಕೂಡಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಒಳಮೀಸಲು ಜಾರಿ ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ತಾಲೂಕು ಡಾ.ಬಾಬು ಜಗಜೀವನರಾಮ್ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಭೈರಾಪುರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಪದಾಧಿಕಾರಿಗಳು ಬಾಬೂಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಲೇಜು ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣಕ್ಕೆ ತೆರಳಿ ಕೆಲಕಾಲ ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ ಮಾತನಾಡಿ, ಮೀಸಲಾತಿ ಎಂಬುದು ಸದ್ಬಳಕೆಯಾಗದ ಕಾರಣ ಶೋಷಿತ ಸಮಾಜವಾಗಿರುವ ಮಾದಿಗ ಸಮುದಾಯ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಮಾದಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಒಳಮೀಸಲು ಅಗತ್ಯವಿದೆ. ಪರಿಶಿಷ್ಟರ ಕೆನೆಪದರು ಮೀಸಲು ಬಗ್ಗೆ ಕಳೆದ ಆ.1ರಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯದಲ್ಲಿ ಬಲ ಮೀಸಲಾತಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಒಳಮೀಸಲಾತಿಯನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಕಾಂಗ್ರೆಸ್ ಅಧಿಕಾರವಿದ್ದರೂ ಜಾರಿ ಮಾಡದೆ ಸಮುದಾಯವನ್ನು ವಂಚಿಸುತ್ತಿದೆ. ಸರ್ಕಾರ ಇನ್ನಾದರೂ ಒಳಮೀಸಲು ಜಾರಿಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು. ಡಾ.ಬಾಬು ಜಗಜೀವನ ರಾಮ್ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಡಿ.ವೆಂಕಟೇಶ್, ಖಜಾಂಚಿ ಬಿ.ಎಲ್.ಮಹದೇವ್, ಮಾಜಿ ಅಧ್ಯಕ್ಷ ಮೂಗೂರು ಸಿದ್ದರಾಜು, ಮುಖಂಡರಾದ ಕೆ.ಶಿವಶಂಕರ್, ಮುತ್ತುರಾಜು, ಎಂ.ಪಿ.ಮಹದೇವಸ್ವಾಮಿ, ಚಿನ್ನಸ್ವಾಮಿ, ಕಳ್ಳಿಪುರ ನಾರಾಯಣ, ಸೋಮಣ್ಣ, ಉಮೇಶ್, ಬಿ.ಮಹದೇವ್, ಎಸ್.ರಾಜು, ತಲಕಾಡು ಸುಂದರ್, ಸುಂದರರಾಜು, ಹೆಬ್ಬೆ ಭಾಸ್ಕರ್, ಸೋಮಣ್ಣ, ರಾಜಪ್ಪ, ಸಿದ್ದನಹುಂಡಿ ಮುತ್ತಣ್ಣ, ವಿಜಾಪುರ ಲಿಂಗರಾಜು, ಹುಣಸೂರು ಮಹದೇವಣ್ಣ, ಬೈರಾಪುರ ಬಸವರಾಜು ಇನ್ನಿತರರಿದ್ದರು.