ಕಾನಹೊಸಹಳ್ಳಿ ಸಮೀಪದ ಹುಡೇಂ ಗ್ರಾಮದಲ್ಲಿ ತಾಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಧರ್ಮಧಿಕಾರಿ ದಾ.ಮ.ಐಮುಡಿ ಶರಣಾರ್ಯರು ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ, ಪ್ರಮುಖರಾದ ಕೆ.ಎಂ.ಶಶಿಧರ್, ಎಚ್.ವಿ.ಸಜ್ಜನ್, ಮಂಜುನಾಥ, ಪಾಲಯ್ಯ ಇತರರಿದ್ದರು. 
ಜಿಲ್ಲೆ

ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯ

ಗಾಯತ್ರಿ ಮಾಲಿಪಾಟೀಲ್

ಕಾನಹೊಸಹಳ್ಳಿ: ಸದಾ ಬರಗಾಲಕ್ಕೆ ತುತ್ತಾಗುವ ಕೂಡ್ಲಿಗಿ ತಾಲೂಕು ಮಳೆಯನ್ನೇ ಆಶ್ರಯಿಸಿದೆ ಆದ್ದರಿಂದ ಸರ್ಕಾರ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಸಾವಯವ ಕೃಷಿಕ ಎಚ್.ವಿ.ಸಜ್ಜನ್ ಹೇಳಿದರು.

ಸಮೀಪದ ಹುಡೇಂ ಗ್ರಾಮದಲ್ಲಿ ತಾಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದ ತಾಲೂಕಿಗೆ ಯಾವುದೇ ನೀರಾವರಿ ಯೋಜನೆ ಜಾರಿಯಾಗಿಲ್ಲ. ರೈತರು ಮಳೆ ಇಲ್ಲದೇ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕಿದ್ದಾರೆ. ಜನ, ಜಾನುವಾರುಗಳಿಗೆ ಕುಡಿವ ನೀರಿಗೂ ಸಂಕಷ್ಟ ಎದುರಾಗಿದೆ. ಆದರೆ, ಈ ವರೆಗೆ ಸರ್ಕಾರಗಳು ನೀರಾವರಿ ಯೋಜನೆ ಜಾರಿಗೊಳಿಸದಿರುವುದು ನೋವಿನ ಸಂಗತಿ. ಈಗಲಾದರೂ ಸಮಸ್ಯೆ ಅರಿತು ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ಮಾತನಾಡಿ, ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಯಾಗದ ಹಿನ್ನೆಲೆ ರೈತರು ಕಷ್ಟ ಪಡುವಂತಾಗಿದೆ. ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಸಾರ್ವಜನಿಕರು ಜಾಗೃತರಾಗಿ ಯೋಜನೆ ಜಾರಿಗೊಳಿಸಲು ಸರ್ಕಾರಗಳಿಗೆ ಒತ್ತಡ ಹೇರಬೇಕು. ಅಲ್ಲದೆ, ಜಗಳೂರು ತಾಲೂಕಿನ ದೊಣೆಹಳ್ಳಿಯಲ್ಲಿ ಮಾ.15ರಂದು ಜಗಳೂರು, ಕೂಡ್ಲಿಗಿ, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ರೈತರ ಸಮಾವೇಶ ನಡೆಯಲಿದ್ದು, ಬರಪೀಡಿತ ತಾಲೂಕುಗಳಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಪಾಲಯ್ಯನಕೋಟೆ ಮಂಜುನಾಥ, ಪ್ರಾಕೃಪಸ ಸಂಘದ ಉಪಾಧ್ಯಕ್ಷ ಪಾಲಯ್ಯ, ಕಾನಮಡುಗು ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಡಾ.ಓಂಕಾರಪ್ಪ, ಪ್ರಮುಖರಾದ ಓಬಣ್ಣ, ಬಿ.ಎಸ್.ಪಾಪಣ್ಣ, ಜರುಗು ಬೋರಯ್ಯ, ಜೊಳ್ಳಜ್ಜರ ಕೆಂಗಯ್ಯ, ಕೋಣನವರ ಪ್ರಭಣ್ಣ, ತುಡುಮ ಗುರುರಾಜ್, ಶರಣಪ್ಪ, ಓಬಯ್ಯ, ಮಲ್ಲಿಕಾರ್ಜುನ, ನಂಜುಂಡಪ್ಪ, ಅಗಸರ ದುರುಗಪ್ಪ, ಭಜನೆ ಬೋರಪ್ಪ, ಪೇಪರ್ ಮಲ್ಲಿಕಾರ್ಜುನ ಇದ್ದರು.