ಜಿಲ್ಲೆ

ಆ.15ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಹೋರಾಟ ಸಮಿತಿ ಸಂಚಾಲಕ ಬಿ.ಕೆ. ಸತೀಶ್ ಎಚ್ಚರಿಕೆ

ಮಂಡ್ಯ: ತಾಲೂಕಿನ ಬೂದನೂರು ಗ್ರಾಮದ ನಿವೇಶನರಹಿತರಿಗೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಿವೇಶನರಹಿತರೊಡಗೂಡಿ ಆ.15ರಂದು ಸ್ವಾತಂತ್ಯುತ್ಸವ ಆಚರಿಸುವ ನಗರದ ಪರೇಡ್ ಮೈದಾನದ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಎಚ್ಚರಿಕೆ ನೀಡಿದರು.

ಬೂದನೂರು ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ಜಮೀನು ಇದೆ. ಆದರೆ ಅಧಿಕಾರಿಗಳು ಅದನ್ನು ನಿವೇಶನರಹಿತರಿಗೆ ನಿವೇಶನ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾಮದ ಎಲ್ಲೆಯೊಳಗೆ ಈ ಹಿಂದೆ 10 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡಲಾಗಿದೆ. ಆದರೆ ಅದರಲ್ಲಿ 2 ಎಕರೆ ಜಮೀನನ್ನು ನಿವೇಶನವನ್ನಾಗಿ ಮಾರ್ಪಡಿಸಿ ಹಂಚಿಕೆ ಮಾಡಲಾಗಿದೆ. ಉಳಿದ 8 ಎಕರೆ ಜಮೀನನ್ನು ಪ್ರಭಾವಿಗಳು ಅನುಭವಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ತಿದ್ದುಪಡಿ ಹಾಗೂ ಬದುಕಿರುವ ಮೃತ ವ್ಯಕ್ತಿ ಎಂದು ದಿಕ್ಕು ತಪ್ಪಿಸಿ ಜಮೀನು ವಶಕ್ಕೆ ಪಡೆಯುವ ಹುನ್ನಾರವನ್ನು ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ನೌಕರರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಹೋರಾಟ ಸಮಿತಿಯ ಸವಿತಾ, ಪದ್ಮ, ಜಯರಾಂ, ನಾಗರತ್ನ ಇದ್ದರು.