ಜಿಲ್ಲೆ

ಗೋ ಶಾಲೆ ವ್ಯವಸ್ಥೆ ಸರಿಪಡಿಸಲು ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಮಾದನಬಾವಿಯಲ್ಲಿನ ಸರ್ಕಾರಿ ಗೋ ಶಾಲೆಯ ದಯನೀಯ ಸ್ಥಿತಿ ಖಂಡಿಸಿ ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗ ದಳ ಕಾರ್ಯಕರ್ತರು ನಗರದ ಪಶು ಸಂಗೋಪನೆ ಇಲಾಖೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಕ್ರಮ ಗೋ ಸಾಗಣೆ ತಡೆದು ರಕ್ಷಿಸಿ ಗೋವುಗಳನ್ನು ಗೋ ಶಾಲೆಗೆ ಕಳುಹಿಸುತ್ತಾರೆ. ಆದರೆ ಗೋ ಶಾಲೆಯಲ್ಲೇ ಗೋವುಗಳು ನರಳಿ ನರಳಿ ಸಾಯುವಂತಹ ಸ್ಥಿತಿ ಉದ್ಭವಿಸಿದೆ. ಈ ವಿಷಯವಾಗಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.

ಗೋ ಶಾಲೆಯಲ್ಲಿ ಗೋವುಗಳಿಗೆ ನಿಲ್ಲಲು ಶೆಡ್​ನಲ್ಲಿ ಜಾಗದ ಕೊರತೆ ಇದೆ. ಶೆಡ್​ ಬಹಳ ಎತ್ತರಕ್ಕೆ ನಿರ್ಮಿಸಿದ್ದರಿಂದ ಮಳೆ ನೀರು ಗೋವುಗಳಿಗೆ ತಾಕುವುದು, ಕುಡಿಯುವ ನೀರಿನ ಕೊರತೆ, ಉತ್ತಮ ಮೇವಿನ ಕೊರತೆ ಕಾಡುತ್ತಿದೆ. ಆರೋಗ್ಯದ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳಿಗೆ ಔಷಧಿಗಳ ಕೊರತೆ ಸಹ ಉಂಟಾಗಿದೆ. ಇವೆಲ್ಲವನ್ನೂ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಅನಾರೋಗ್ಯದಿಂದ ಮೃತಪಟ್ಟ ಗೋವುಗಳ ಅಂತ್ಯಕ್ರಿಯೆ ಮಾಡದೆ, 4-5 ದಿನಗಳ ಕಾಲ ಅದೇ ಜಾಗದಲ್ಲಿ ಬಿಡುತ್ತಾರೆ. ಅಂತ್ಯಕ್ರಿಯೆಗೆ ತೋಡಿದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಗೋವುಗಳನ್ನು ನಾಯಿ, ಇತರ ಪ್ರಾಣಿಗಳು ತಿನ್ನುವಂತಾಗಿದೆ. ಸರ್ಕಾರಿ ಗೋ ಶಾಲೆಯಲ್ಲಿ ಇಷ್ಟೆಲ್ಲ ಅವಾಂತರಗಳಿದ್ದರೂ ಅಧಿಕಾರಿಗಳು ಸುಧಾರಣೆಗೆ ಮುಂದಾಗುತ್ತಿಲ್ಲ. ಕೂಡಲೇ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪಶು ಸಂಗೋಪನಾ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಪಶು ಸಂಗೋಪನಾ ಇಲಾಖೆ ಮುಖ್ಯ ಕಾರ್ಯದಶಿರ್ಗೆ ಮನವಿಪತ್ರ ರವಾನಿಸಿದರು.

ಬಜರಂಗದಳ ಸಂಚಾಲಕ ಶಿವಾನಂದ ಸತ್ತಿಗೇರಿ, ಅನುದೀಪ ಕುಲಕರ್ಣಿ, ಮಹೇಶ ಪಾಟೀಲ, ಡಾ. ಮಂಜುನಾಥ್​, ಸಿದ್ದು ಹಿರೇಮಠ, ಸುರೇಶ ಭಜಂತ್ರಿ, ಸೋಮಶೇಖರ ಚನ್ನಶೆಟ್ಟಿ, ಬಜರಂಗ ದಳ ಹಾಗೂ ವಿಶ್ವ ಹಿಂದು ಪರಿಷದ್​ ಕಾರ್ಯಕರ್ತರು, ಇತರರು ಇದ್ದರು.