ಜಿಲ್ಲೆ

ಮೋತಿ ತಲಾಬ್‌ಗೆ ನೀರು ತುಂಬಿಸಲು ಒತ್ತಾಯ

ವಿವೇಕಾನಂದ ದಾಸನಕೊಪ್ಪ

ಸವಣೂರ: ಕಳಸೂರ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ನಿಂದ ಪಟ್ಟಣ ಮೋತಿ ತಲಾಬ್‌ಗೆ ನೀರು ತುಂಬಿಸಲು ಒತ್ತಾಯಿಸಿ ರೈತ ಸಂಘ ಪದಾಧಿಕಾರಿಗಳು ಹಾಗೂ ರೈತರು ಗುರುವಾರ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪ ವಿಭಾಗಾಧಿಕಾರಿ ಮೊಹಮ್ಮದ್ ಖಿಜರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮೋತಿ ತಲಾಬ್‌ಗೆ ಶಿಗ್ಗಾಂವಿ ಏತ ನೀರಾವರಿ ಯೋಜನೆಯಿಂದ ವರದಾ ನದಿ ನೀರು ತುಂಬಿಸಲಾಗುತ್ತಿದೆ. ಆದರೆ, ಈ ನೀರಿನಿಂದ ಕೆರೆ ತುಂಬುವುದು ತಡವಾಗಲಿದೆ. ಆದ್ದರಿಂದ ಕೆರೆ ಪಕ್ಕದಲ್ಲಿ ಹಾಯ್ದು ಹೋಗಿರುವ ಕಳಸೂರ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ನಿಂದ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ 8 ದಿನಗಳಲ್ಲಿಯೇ ಕೆರೆ ಭರ್ತಿಯಾಗಿ ಸವಣೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲು ಸಹಕಾರಿಯಾಗುತ್ತದೆ. ಸುಮಾರು 1ರಿಂದ 1.5 ಲಕ್ಷ ಜನರಿಗೆ ಕಾಯಂ ಹಾಗೂ ತ್ವರಿತವಾಗಿ ಕುಡಿಯುವ ನೀರು ಪೂರೈಕೆಯಾಗಲು ಶಾಶ್ವತ ಯೋಜನೆಯಾಗುತ್ತದೆ. ಅಲ್ಲದೆ, ರೈತರ ಜಮೀನಿನಲ್ಲಿರುವ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ನೀರಾವರಿ ಬೇಸಾಯ ಮಾಡಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರೈತ ಸಂಘದ ಪದಾಧಿಕಾರಿಗಳಾದ ಸಂಗಮೇಶ ಪಿತಾಂಭ್ರಶೆಟ್ಟಿ, ಬಾಬು ಪರಾಶ, ನಾಗರಾಜ ಬಂಕಾಪುರ, ಕುಮಾರ ಗಾಣಗೇರ, ಮುಂಜಿಮ ಬಿ., ಸಂದೀಪ ಬಾಬನಿ, ಪ್ರಶಾಂತ ಮುಗಳಿ, ರೈತರು ಇತರರು ಇದ್ದರು.