ಜಿಲ್ಲೆ

ಟೌನ್‌ಶಿಪ್ ಯೋಜನೆ ಕೈಬಿಡಲು ಆಗ್ರಹ

ರೇಷ್ಮೆ ನಗರ ಡೆಸ್ಕ್

ಬಿಡದಿ: ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಆಕ್ಷೇಪಣೆ ಸಲ್ಲಿಕೆ ಮಾಡಿರುವ ರೈತರ ವಿಚಾರಣೆ ನಡೆಸುವ ಕುರಿತು ಭೂ ಮಾಲೀಕರಿಗೆ ನೋಟಿಸ್ ನೀಡಿರುವ ಕ್ರಮವನ್ನು ಹಲವು ರೈತರು ಖಂಡಿಸಿದ್ದಾರೆ.

ಹೊಸೂರು ಗ್ರಾಮದಲ್ಲಿ ಬೈರಮಂಗಲ ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಯ್ಯ, ಭೂಸ್ವಾಧೀನ ವಿರೋಧಿಸಿ ಸಂಘದಿಂದ ಹಾಗೂ ರೈತರ ಹಲವು ಸಭೆ ಮಾಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿದ್ದೇವೆ. ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಈವರೆಗೆ ಒಂದೂ ಸಭೆ ಕರೆದು ರೈತರ ಬಳಿ ಚರ್ಚಿಸಿಲ್ಲ ಎಂದು ಆರೋಪಿಸಿದರು.

ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಿರುವ ರೈತರಿಗೆ ನೋಟಿಸ್ ಜಾರಿ ಮಾಡಿ ಭೂಸ್ವಾಧೀನಾಧಿಕಾರಿ ಮುಂದೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ನೋಟಿಸ್ ತೆಗೆದುಕೊಳ್ಳದೆ ಹಾಗೂ ವಿಚಾರಣೆಗೆ ಬಾರದೆ ಇರುವ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಮ್ಮತಿಯಿದೆ ಎಂದು ಭಾವಿಸುವುದಾಗಿ ಬಿಂಬಿಸಲಾಗುತ್ತಿದೆ ಎಂದರು.

ರೈತರು ಬೇಡವೆಂದರೂ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಲು ಹುನ್ನಾರ ನಡೆದಿದೆ. ತುಂಡುಭೂಮಿ ಹೊಂದಿರುವ ರೈತರ ಮುಂದಿನ ಪೀಳಿಗೆಯನ್ನು ಸರ್ವನಾಶ ಮಾಡಲು ಸರ್ಕಾರ ಮುಂದಾಗಿದೆ. ಅನ್ನದಾತನ ಬೆನ್ನೆಲುಬು ಮುರಿಯುವ ಕೆಲಸ ಇದಾಗಿದೆ, ಟೌನ್‌ಶಿಪ್ ಯೋಜನೆ ಕೈಬಿಟ್ಟು ರೈತರನ್ನು ಬದುಕಲು ಬಿಡಿ ಎಂದು ಮನವಿ ಮಾಡಿದರು.