ಜಿಲ್ಲೆ

ಕಾಲುವೆಗೆ ನೀರು ಹರಿಸಲು ಆಗ್ರಹ

ಕೆ.ಆರ್.ಪೇಟೆ: ತಾಲೂಕಿನ ಹೇಮಗಿರಿ ಅಣೆಕಟ್ಟೆಯಿಂದ ವಿಠಲಾಪುರ ಭಾಗದ ಕಾಲುವೆಗಳಿಗೆ ನೀರು ಹರಿಸಿ ಭತ್ತದ ಫಸಲನ್ನು ಸಂರಕ್ಷಿಸುವಂತೆ ಒತ್ತಾಯಿಸಿ ನೂರಾರು ರೈತರು ಹೇಮಾವತಿ ಜಲಾಶಯ ಯೋಜನೆಯ ನಂ.20 ಉಪವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಹೇಮಾವತಿ ಅಣೆಕಟ್ಟೆಯಿಂದ ತ್ರಿಶೂಲ್ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ಯಥೇಚ್ಛವಾಗಿ ನೀರು ಹರಿಸುತ್ತಿದ್ದು, ವಿದ್ಯುತ್ ಉತ್ಪಾದನೆಯ ನಂತರ ಬಳಸಿದ ನೀರು ನದಿಯ ಮೂಲಕ ಕೃಷ್ಣರಾಜಸಾಗರ ಜಲಾಶಯಕ್ಕೆ ಸೇರುತ್ತಿದೆ. ಆದರೆ, ಹೇಮಗಿರಿ ಅಣೆಕಟ್ಟೆಯ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಭೂ ಪ್ರದೇಶದಲ್ಲಿ ಕಬ್ಬು ಮತ್ತು ಭತ್ತ ಬೆಳೆಯಲಾಗಿದ್ದು, ತೆನೆಯೊಡೆಯುವ ಸಮಯದಲ್ಲಿ ನಾಲೆಯಲ್ಲಿ ನೀರು ಹರಿಯದಿರುವುದರಿಂದ ಫಸಲು ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ ಎಂದು ದೂರಿದರು.


ನಾಲೆಯಲ್ಲಿ ನೀರು ಹರಿಸದ ಪರಿಣಾಮ ವಿಠಲಾಪುರ, ಕೂಡಲಕುಪ್ಪೆ, ಪರದೇಶಗೌಡನ ಕೊಪ್ಪಲು, ಯಗಚಗುಪ್ಪೆ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆಯಲ್ಲಿರುವ ಬೆಳೆಗೆ ಹಾನಿಯಾಗುತ್ತಿದೆ. ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ವಿಠಲಾಪುರ ಸುಬ್ಬೇಗೌಡ, ರಾಜಶೇಖರ್, ನಾರಾಯಣಗೌಡ, ನರಸಿಂಹೇಗೌಡ, ಮೋಹನ, ಪಾಂಡುರಂಗೇಗೌಡ ಸೇರಿದಂತೆ ಹಲವರು ಎಇಇ ವಿಶ್ವನಾಥ್ ಅವರಿಗೆ ದಿಗ್ಬಂಧನ ಹಾಕಿದರು. ನೀರಾವರಿ ಇಲಾಖೆ ಇಂಜಿನಿಯರ್‌ಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಇ ರಾಘವೇಂದ್ರ ಮತ್ತಿತರರು ಇದ್ದರು.