ಮಣಿಪುರದಲ್ಲಿ ನಡೆದಿರುವ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿ ಪ್ರಕರಣವನ್ನು ಖಂಡಿಸಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಮಸ್ವಾಮಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಸದಸ್ಯರು, ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಮಣಿಪುರದಲ್ಲಿ ಹಿಂಸೆ ಕೊನೆಗೊಳ್ಳಲಿ, ಅಲ್ಲಿನ ಬಿಜೆಪಿ ಸರ್ಕಾರ ವಜಾಗೊಳ್ಳಲಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ಮಣಿಪುರದಲ್ಲಿ ನಡೆದಿರುವ ಕೃತ್ಯ ಜಗತ್ತಿನ ಎದುರು ಭಾರತ ತಲೆತಗ್ಗಿಸುವಂತಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಿಸಬೇಕು. ರಾಜಕೀಯ ಅಧಿಕಾರಕ್ಕಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಜಗಳ ಹಚ್ಚಲಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಮಣಿಪುರದಲ್ಲಿ ಸಾವಿರಾರು ಅತ್ಯಾಚಾರ ಪ್ರಕರಣಗಳು ವರದಿಯಾದರೂ ಡಬಲ್ ಇಂಜಿನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಪೊಲೀಸರ ಎದುರೇ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ. ವಿಶ್ವ ಗುರು ಮೋದಿ ಅವರು ಸಂಸತ್ತಿನಲ್ಲಿ ಉತ್ತರ ಕೊಡದೆ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಒಡನಾಡಿಯ ಸ್ಟ್ಯಾನ್ಲಿ ಮಾತನಾಡಿ, ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಿಸಲು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿಲ್ಲ. ಹಾಗಾಗಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದರು.
ಹೋರಾಟಗಾರರಾದ ರತಿರಾವ್, ರಾಮೇಶ್ವರಿ ವರ್ಮ, ಉಮಾದೇವಿ, ಪ್ರೊ.ಶ್ರೀದೇವಿ, ಪ್ರೊ.ಲತಾ ಕೆ.ಬಿದ್ದಪ್ಪ, ಸ್ವರ್ಣಮೂಲ ಶಿರಸಿ, ಕಲೀಂ, ಪಂಡಿತಾರಾಧ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ, ಸಮತಾ ವೇದಿಕೆಯ ಸುಶೀಲಾ, ಪ್ರೊ.ವನಜಾ, ನಾ.ದಿವಾಕರ, ಜಗನ್ನಾಥ್, ಚೌಡಳ್ಳಿ ಜವರಯ್ಯ, ಪಿ.ಪಿ.ಬಾಬುರಾಜು, ಉಗ್ರನರಸಿಂಹೇಗೌಡ, ಶಂಭುಲಿಂಗಸ್ವಾಮಿ, ಟಿ.ಆರ್.ಸುನಿಲ್‌ಕುಮಾರ್, ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಯತಿರಾಜ್, ನೆಲೆ ಹಿನ್ನೆಲೆ ಕೆ.ಆರ್.ಗೋಪಾಲಕೃಷ್ಣ, ಸಂಧ್ಯಾ ಭಾಗವಹಿಸಿದ್ದರು.