ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಮಾತನಾಡಿದರು. 
ಜಿಲ್ಲೆ

ಪಾಕಿಸ್ತಾನ ಪ್ರಜೆಗಳ ವಿವರ ಬಹಿರಂಗಪಡಿಸಲು ಆಗ್ರಹ

ಶಿವಮೊಗ್ಗ: ಕರ್ನಾಟಕದಲ್ಲಿರುವ ಪಾಕಿಸ್ತಾನ ಪ್ರಜೆಗಳ ವಿವರವನ್ನು ರಾಜ್ಯ ಸರ್ಕಾರ ತಕ್ಷಣವೇ ಬಹಿರಂಗಪಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈಗಾಗಲೇ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ ಮತ್ತು ಎಷ್ಟು ಮಂದಿ ಬಂದಿದ್ದರು? ಎಷ್ಟು ಸಮಯದಿಂದ ಇದ್ದರು? ಎಂಬ ಮಾಹಿತಿಯನ್ನು ಕೇಂದ್ರಕ್ಕೆ ರವಾನೆ ಮಾಡಿವೆ. ಆದರೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರದ ಆದೇಶ ಪಾಲನೆ ಆಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಸಂಬಂಧ ವಿಶೇಷವಾಗಿ ಕರ್ನಾಟಕದಲ್ಲಿ ಇನ್ನೂ ಎಷ್ಟು ಮಂದಿ ಪಾಕಿಸ್ತಾನದವರಿದ್ದಾರೆ? ಎಷ್ಟು ಮಂದಿ ವಾಪಸ್ ಹೋಗಿದ್ದಾರೆ? ಇನ್ನೂ ಕೆಲವರು ಯಾವ ಉದ್ದೇಶಕ್ಕಾಗಿ ಕರ್ನಾಟಕದಲ್ಲೇ ಉಳಿದಿದ್ದಾರೆ? ಎಂಬ ಮಾಹಿತಿ ನೀಡಲು ನಿರ್ದೇಶನ ನೀಡುವಂತೆ ಮೇ 9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಉತ್ತರ ಕನ್ನಡ, ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೂ 150ಕ್ಕೂ ಅಧಿಕ ಪಾಕಿಸ್ತಾನಿ ಪ್ರಜೆಗಳಿದ್ದಾರೆಂಬ ಗುಪ್ತಚರ ಇಲಾಖೆ, ಪೊಲೀಸರ ಬಳಿ ಮಾಹಿತಿ ಇದೆ. ಆದರೆ ಸರ್ಕಾರ ಅದನ್ನು ಬಹಿರಂಗ ಪಡಿಸುತ್ತಿಲ್ಲ. ಕರ್ನಾಟಕದಲ್ಲಿ ಉಳಿದಿರುವವರಿಗೆ ಪಾಕಿಸ್ತಾನದ ನಿಟಕ ಸಂಪರ್ಕ ಇರುತ್ತದೆ. ರಾಜ್ಯ ಸರ್ಕಾರ ಮುಸ್ಲಿಮರ ಭಯಕ್ಕೆ ಒಳಗಾಗಿದೆ. ನಾವು ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿಲ್ಲ. ಬದಲಾಗಿ ಪಾಕಿಸ್ತಾನದವರನ್ನು ಮಾತ್ರ ಕಳುಹಿಸಲು ಹೇಳಿದ್ದೇವೆ. ಆದರೆ ಮತ ರಾಜಕಾರಣಕ್ಕಾಗಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ವಿವಿಧ ಪ್ರಕೋಷ್ಠಗಳ ಅಧ್ಯಕ್ಷರಾದ ಡಾ. ಶ್ರೀನಿವಾಸ ರೆಡ್ಡಿ, ಪೆರುಮಾಳು, ಭವಾನಿ ರಾವ್ ಮೋರೆ, ಎನ್.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು