ತಿ.ನರಸೀಪುರ: ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಕಾರ್ಮಿಕರ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಎಂದು ಸಿಡಬ್ಲ್ಯುಎಫ್‌ಐ ರಾಜ್ಯ ಕಾರ್ಯಧ್ಯಕ್ಷ ಬಿ.ಉಮೇಶ್ ಆಗ್ರಹಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಕಟ್ಟಡ ಕಾರ್ಮಿಕರ 2ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದುಡಿಮೆಯನ್ನೇ ಬದುಕಾಗಿಸಿಕೊಂಡಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ವಸತಿ ಶಾಲೆಗೆ ನೀಡುವುದನ್ನು ಸರ್ಕಾರ ತಡೆಯಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ತಾಲೂಕು ಅಧ್ಯಕ್ಷ ಸಿ.ಬಿ.ನವೀನ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ ಶೈಕ್ಷಣಿಕ ಧನ ಸಹಾಯ ಬಿಡುಗಡೆಗೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾರ್ಮಿಕ ನಾಯಕರನ್ನು ಅಂಬೇಡ್ಕರ್ ಭವನದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಕರೆತರಲಾಯಿತು.
ಸಮ್ಮೇಳನದಲ್ಲಿಯೇ ಸಂಘಟನೆಯ ತಾಲೂಕು ಸಮಿತಿಗೆ ಸಿ.ಬಿ.ನವೀನ್ ಕುಮಾರ್(ಅಧ್ಯಕ್ಷ) ಸೇರಿದಂತೆ ಕೆ.ಸಿ.ಕೃಷ್ಣ(ಪ್ರಧಾನ ಕಾರ್ಯದರ್ಶಿ), ಎಂ.ಮಲ್ಲೇಶ್ (ಖಜಾಂಚಿ), ಶಿವಕುಮಾರ್(ಸಹ ಖಜಾಂಚಿ), ಶಿವಲಿಂಗಶೆಟ್ಟಿ(ಗೌರವಾಧ್ಯಕ್ಷ), ಬಸವರಾಜ್(ಉಪಾಧ್ಯಕ್ಷ) ಹಾಗೂ ಶಶಿಕಲಾ ಸಿದ್ದರಾಜು(ಸಹ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.
ಸಮ್ಮೇಳನದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಯರಾಮ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಸುಶೀಲಾ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ.ಬಸವಯ್ಯ, ಜಿಲ್ಲಾ ಖಜಶಂಚಿ ವಿ.ಸೋಮಶೇಖರ್ ಸಿಐಟಿಯು ತಾಲೂಕು ಉಸ್ತುವಾರಿ ಶಶಿಕುಮಾರ್, ಪದಾಧಿಕಾರಿಗಳು ಇದ್ದರು.