ಕಲಘಟಗಿ: ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದಲ್ಲಿ ಆರಂಭಿಸಿರುವ ಎಂಎಸ್‌ಐಎಲ್ ಮದ್ಯದ ಮಳಿಗೆಯನ್ನು ಬಂದ್ ಮಾಡಲು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಮಳಿಗೆ ಎದುರು ಪ್ರತಿಭಟನೆ ನಡೆಸಿದರು.
ಮದ್ಯದ ಮಳಿಗೆ ಬಂದ್ ಮಾಡುವಂತೆ ಗ್ರಾಮಸ್ಥರು ಈ ಹಿಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಕಳೆದ ಮೂರು ದಿನಗಳಿಂದ ಮತ್ತೆ ಎಂಎಸ್‌ಐಎಲ್ ಮಳಿಗೆ ಆರಂಭಿಸಲಾಗಿದೆ. ಮದ್ಯದ ಅಂಗಡಿ ತೆರೆಯುವುದರಿಂದ ಗ್ರಾಮದ ಯುವಕರು ಚಟಕ್ಕೆ ದಾಸರಾಗುತ್ತಾರೆ. ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದ ಮಳಿಗೆ ಆರಂಭಿಸಲು ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಬಕಾರಿ ನಿರೀಕ್ಷಕ ಅಮಿತ ಬೆಳ್ಳೂಬ್ಬಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಕಲಘಟಗಿ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ಗ್ರಾಮಸ್ಥರಾದ ಬಸಪ್ಪ ಬಡಪ್ಪನವರ, ಈರಪ್ಪ ಕಟ್ಟಿಮನಿ, ಫಿರೋಜಿ ಗೋಡೆನ್ನವರ, ಲಕ್ಷ್ಮಣ ನಾಕಾಪುರ, ಹೊಳೆಯವ್ವ ಹೊಸಮನಿ, ಭೀಮ್ಮಪ್ಪ ಅಜ್ಜುನವರ, ಲಕ್ಷ್ಮಣ ಬಡಪ್ಪನವರ, ದೇವಪ್ಪ ಗಾಮನ್ನವರ, ಸಾವಕ್ಕ ಡೊಳ್ಳಿನ, ನೀಲಮ್ಮ ನೂಲ್ವಿ, ಚನ್ನಪ್ಪ ಗಾಮನ್ನವರ, ಸಹದೇವ ಗುಡಿಹಾಳ, ಮಂಜವ್ವ ಮುಕ್ಕಲ್ಲ, ಸಾವಕ್ಕ ಹೊಸಮನಿ, ದಾಕ್ಷಾಯಿಣಿ ಜೀವಣ್ಣವರ, ಇತರರಿದ್ದರು.