ಬೇಲೂರು: ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿರುವ ಹಂದಿ ಮಾಂಸ ಮಾರಾಟದ ಅಂಗಡಿಯನ್ನು ಮುಚ್ಚಿಸುವಂತೆ ಒತ್ತಾಯಿಸಿ ನವೀಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಂಗಡಿ ಎದುರು ಮಂಗಳವಾರ ಪ್ರತಿಭಟಿಸಿ, ತೊಳಲು ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಪಂ ಸದಸ್ಯ ಶಶಿಕುಮಾರ್ ಮಾತನಾಡಿ, ಈಗಾಗಲೇ ಪ್ರಪಂಚದ ಎಲ್ಲ ದೇಶಗಳಲ್ಲೂ ಕರೊನಾ ವೈರಸ್ ಹಾಗೂ ಇನ್ನಿತರ ರೋಗಗಳ ಭೀತಿ ಕಾಡಲು ಸ್ವಚ್ಛತೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ನವೀಲಹಳ್ಳಿ ಗ್ರಾಮದಲ್ಲಿರುವ ಹಂದಿ ಮಾಂಸ ಮಾರಾಟಗಾರರಿಗೆ ಇಲ್ಲಿ ಮಾಂಸ ಮಾರಾಟ ಮಾಡದಂತೆ ಈ ಮೊದಲೇ ಗ್ರಾಮಸ್ಥರು ಹಾಗೂ ಗ್ರಾಪಂ ಅಧಿಕಾರಿಗಳು ತಿಳಿಸಿದ್ದರೂ ಮಾಂಸ ಮಾರಾಟ ಎಗ್ಗಿಲ್ಲದೆ ಮುಂದುವರಿದಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಮಾಂಸ ಮಾರಾಟ ಮಾಡುವುದನ್ನು ನಿಲ್ಲಿಸಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲ ಒಟ್ಟುಗೂಡಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಆಲಿಸಿ ಮಾತನಾಡಿದ ತೊಳಲು ಗ್ರಾಪಂ ಪಿಡಿಒ ಆರತಿ, ಈಗಾಗಲೇ ಹಂದಿ ಮಾಂಸದ ಅಂಗಡಿ ಮಾಲೀಕರಿಗೆ ಮಾಂಸ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಮತ್ತೆ ಮುಂದುವರಿದಿದೆ. ಮತ್ತೆ ಮುಂದುವರಿಸಿದ್ದೇ ಆದಲ್ಲಿ ಅಂಗಡಿಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ತೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ಮಾಜಿ ತಾಪಂ ಸದಸ್ಯ ಕುಮಾರ್, ಗ್ರಾಪಂ ಸದಸ್ಯ ರವಿ, ಮಾಜಿ ಸದಸ್ಯ ದೇವರಾಜ್, ಗ್ರಾಮಸ್ಥರಾದ ನಾಗಣ್ಣ, ಹೇಮರಾಜು, ರವಿತೇಜ, ಶಮಂತ್, ಗಿರೀಶ್, ಕುಮಾರ್, ಅಣ್ಣಪ್ಪ, ಯೋಗೀಶ್, ರಾಮಯ್ಯ ಇನ್ನಿತರರಿದ್ದರು.
ಚಿತ್ರ:17(ಬಿಎಲ್‌ಆರ್)5-ಹಂದಿ ಮಾಂಸದ ಅಂಗಡಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನವೀಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು.