ಜಿಲ್ಲೆ

ಇ-ಟೆಂಡರ್ ರದ್ದುಪಡಿಸಲು ಆಗ್ರಹ

ಪ್ರಸಿನ್ ಕೆ.ಆರ್

ಬೇಲೂರು: ಪುರಸಭೆಗೆ ಸೇರಿದ 63 ವಾಣಿಜ್ಯ ಮಳಿಗೆಗಳ ಇ-ಪ್ರಕ್ಯೂರ್‌ಮೆಂಟ್ ಹರಾಜಿನಲ್ಲಿ ಅಕ್ರಮ ನಡೆದಿದ್ದು, ಈಗ ನಡೆದಿರುವ ಹರಾಜನ್ನು ರದ್ದುಗೊಳಿಸುವಂತೆ ಕೋರಿ ಸಾರ್ವಜನಿಕರು ಸೋಮವಾರ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹಾಗೂ ಮಖ್ಯಾಧಿಕಾರಿ ಸುಜಯ್ ಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ನಾಗರಿಕ ವೆಂಕಟೇಶ್ ಮಾತನಾಡಿ, ಪುರಸಭೆಗೆ ಸೇರಿದ 63 ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಒಳಒಪ್ಪಂದ ನಡೆದಿದೆ. ಮುಖ್ಯರಸ್ತೆಯಲ್ಲಿರುವ ಒಂದು ಮಳಿಗೆ ಒಂದಕ್ಕೆ ಮೂರು ಸಾವಿರ ರೂ. ಬಾಡಿಗೆ ಇದ್ದರೆ, ಮತ್ತೊಂದಕ್ಕೆ 4 ಲಕ್ಷದ 31 ಸಾವಿರಕ್ಕೆ ಬಾಡಿಗೆಗೆ ಹೋಗಿದೆ. ಒಳ ಒಪ್ಪಂದದಿಂದಾಗಿ ಪುರಸಭೆಗೆ ತಿಂಗಳಿಗೆ ಬರಬೇಕಾಗಿದ್ದ 15 ಲಕ್ಷ ರೂ. ಹಾಗೂ ವರ್ಷಕ್ಕೆ ಕೋಟ್ಯಂತರ ರೂ. ಆದಾಯ ಕೈತಪ್ಪಿದೆ. ಜತೆಗೆ ಈ ಎಲ್ಲ ಹಣ ಪುರಸಭೆಗೆ ತೆರಿಗೆ ರೂಪದಲ್ಲಿ ಬಂದಿದ್ದರೆ ಪುರಸಭೆ ಆರ್ಥಿಕವಾಗಿ ಲಾಭದಲ್ಲಿರುತ್ತಿತ್ತು ಎಂದರು.

ಈಗಿರುವ 63 ಜನ ಮಳಿಗೆದಾರರ ಕಲ್ಯಾಣಕ್ಕಾಗಿ ಶಾಸಕರು, ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ ಮುಂದಾಗಿರುವುದನ್ನು ನೋಡಿದರೆ ಇಲ್ಲಿ ಸಾರ್ವಜನಿಕರು, ಬಡವರಿಗೆ ಮೋಸವಾಗುತ್ತಿದೆ. ಆದ್ದರಿಂದ ಟೆಂಡರ್ ಅನ್ನು ರದ್ದು ಮಾಡಿ ಕೂಡಲೇ ಜನ ಸಾಮಾನ್ಯರಿಗೆ ನ್ಯಾಯ ಸಿಗುವಂತೆ ಮಾಡಬೇಕು. ಈಗಾಗಲೇ ಈ ವಿಚಾರವಾಗಿ ಮುಖ್ಯಾಧಿಕಾರಿ ಸೇರದಿಂತೆ ಜಿಲ್ಲಾಧಿಕಾರಿಗೂ ಮನವಿ ಪತ್ರ ನೀಡಿದ್ದೇವೆ. ಅವರು ಸಾರ್ವಜನಿಕರ ಅಪೇಕ್ಷೆಯಂತೆ ಟೆಂಡರ್ ರದ್ದು ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಮುಗಿಯುವವರೆಗೂ ಅಲ್ಲಿನ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಾಸಕರೊಂದಿಗೆ ಚರ್ಚಿಸಿ ಅವರಿಗೇ ಅವಕಾಶ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಕಾನೂನು ಪ್ರಕಾರವೇ ಇ-ಟೆಂಡರ್ ಪ್ರಕ್ರಿಯೆ ನಡೆಸಿದ್ದೇವೆ. ಆದರೆ ಕೆಲವರು ತಮಗೆೆ ಕೆಟ್ಟ ಹೆಸರು ಬರಲಿ ಎಂದ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಪುರಸಭೆಯ 63 ಮಳಿಗೆಗಳನ್ನು ಹರಾಜು ಮಾಡಿದ್ದೇವೆ. ಇಲ್ಲಿ ಯಾವುದೇ ಒಪ್ಪಂದ ನಡೆದಿಲ್ಲ. ಆದರೆ ಈಗ ಹೈಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಆದ್ದರಿಂದ ಮಳಿಗೆ ವಿಚಾವಾಗಿ ಯಾವುದೇ ಕ್ರಮ ಸಾಧ್ಯವಿಲ್ಲ. ಪ್ರಗತಿಪರ ಸಂಘಟನೆಗಳ ಮನವಿ ಸ್ವೀಕರಿಸಿದ್ದೇವೆ. ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮುಖಂಡರಾದ ಅನೀಲ್, ಸತೀಶ್, ಕೋಳಿ ರಘು, ತೋಟೇಶ್, ಗಂಗರಾಜು, ಅಣ್ಣಪ್ಪ, ರಾಘು ಇತರರಿದ್ದರು.