ಜಿಲ್ಲೆ

ಸಮರ್ಪಕ ಸಾರಿಗೆ ವ್ಯವಸ್ಥೆಗೆ ಒತ್ತಾಯ

ಲಲಾಟಾಕ್ಷ ಎಸ್

ಸೋಮವಾರಪೇಟೆ: ಸೋಮವಾರಪೇಟೆ ಮಾರ್ಗದಲ್ಲಿ ಸಮರ್ಪಕವಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸದೆ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಡಿಪೋ ವ್ಯವಸ್ಥಾಪಕರು ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.


ಹಿಂದಿನಿಂದಲೂ ಸೋಮವಾರಪೇಟೆ ಮಾರ್ಗವನ್ನು ನಿರ್ಲಕ್ಷಿಸುತ್ತಿದ್ದು, ಸರಿಯಾದ ವೇಳೆಗೆ ಬಸ್‌ಗಳು ಬರುತ್ತಿಲ್ಲ. ಹಲವು ಬಸ್‌ಗಳು ಮಾರ್ಗಮಧ್ಯದಲ್ಲಿ ನಿಲ್ಲುತ್ತಿವೆ. ಒಂದು ವಾರದಲ್ಲಿ ಮೂರು ಬಾರಿ ಬಸ್‌ಗಳು ಮಾರ್ಗ ಮಧ್ಯೆ ಕೆಟ್ಟು ನಿಂತಿದೆ. ಮಡಿಕೇರಿ ಡಿಪೋಗೆ ಸೇರಿದ ಬಸ್‌ಗಳನ್ನು ದುರಸ್ತಿ ಮಾಡುತ್ತಿಲ್ಲ. ಪ್ರಯಾಣಿಕರ ಜೀವಕ್ಕೆ ತೊಂದರೆ ಆದರೆ ಯಾರು ಹೊಣೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.


ಹಲವು ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಕೆಲವು ಬಸ್‌ಗಳು ದೋಷದಿಂದ ಕೂಡಿದ್ದರೂ ಎಫ್.ಸಿ.(ಕ್ಷಮತಾ ಪ್ರಮಾಣ ಪತ್ರ)ನೀಡಲಾಗಿದೆ. ಬಸ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಮೊದಲೇ ಗೊತ್ತಿದ್ದರೂ ಅದನ್ನು ಡಿಪೋದಲ್ಲಿ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ತಕ್ಷಣ ಸಮಸ್ಯೆಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.