ಜಿಲ್ಲೆ

ಭೈರನಪಾದ ಆಣೆಕಟ್ಟು ನಿರ್ಮಿಸಲು ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಬಳಿ ತುಂಗಭದ್ರಾ ನದಿ ವಿಭಜಿಸುವ ಸ್ಥಳದಲ್ಲಿ ಭೈರನಪಾದ ಆಣೆಕಟ್ಟು ನಿರ್ಮಿಸಬೇಕು ಎಂದು ಕರ್ನಾಟಕ ಥಿಂಕರ್ಸ್​ ಫೋರಂ ಅಧ್ಯಕ್ಷ ಪಿ.ಎಚ್​. ನೀರಲಕೇರಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಕಥೆಗಳಲ್ಲಿ ಉಲ್ಲೇಖಿಸಿದಂತೆ ಹರಿಹರ ತಾಲೂಕಿನ ಗೋವಿನಾಳ ಗ್ರಾಮದ ಪೂರ್ವಕ್ಕೆ ಭೈರನಪಾದ ದೇವರ ಪಾದ ಹಾಗೂ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗ್ರಾಮ ಬಳಿ (ಪಶ್ಚಿಮಕ್ಕೆ) ತಲೆ ಭಾಗವಿದೆ. ಈ ಎರಡು ಸ್ಥಳಗಳನ್ನು ಸೇರಿಸುವ ಮೂಲಕ ಹರಿಹರ ತಾಲೂಕಿನ ಭೈರನಪಾದ ಬಳಿ ಆಣೆಕಟ್ಟು ನಿರ್ಮಿಸಬೇಕು. ಇದರಿಂದ ಕೆಳ ಭಾಗದ ಲಕ್ಷಾಂತರ ಹೆಕ್ಟೇರ್​ ಜಮೀನುಗಳ ನೀರಾವರಿಗೆ ಮತ್ತು ಜನ- ಜಾನುವಾರುಗಳಿಗೆ ನೀರು ಸಿಗಲಿದೆ ಎಂದರು.
ಈ ಯೋಜನೆ ಅನುಷ್ಠಾನಗೊಂಡಲ್ಲಿ ಗದಗ ಜಿಲ್ಲೆಯ 4.82 ಲಕ್ಷ ಹೆಕ್ಟೇರ್​, ಬಾಗಲಕೋಟೆಯ 3.50 ಹೆಕ್ಟೇರ್​, ಹರಿಹರದ 3 ಲಕ್ಷ, ಬಳ್ಳಾರಿಯ 2.50 ಲಕ್ಷ, ಧಾರವಾಡ 22 ಲಕ್ಷ, ಕಾರವಾರ 1.75 ಲಕ್ಷ ಹೆಕ್ಟೇರ್​ ಪ್ರದೇಶ ಸೇರಿ ಒಟ್ಟು 1.50 ಕೋಟಿ ರೈತರ ಕುಟುಂಬಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.
ಕೊಪ್ಪಳ ಜಿಲ್ಲೆಯ ನವಿಲೇ ಯೋಜನೆಯಿಂದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಮಾತ್ರ ಅನುಕೂಲವಾಗಲಿದೆ. ಆ ಜಿಲ್ಲೆಗಳು ಈಗಾಗಲೇ ಭಾಗಶಃ ನೀರಾವರಿ ಸೌಲಭ್ಯ ಪಡೆದಿವೆ. ನವಿಲೇ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ 13 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆ ಮುಖ್ಯವಾಗಿದೆ. ಹೀಗಾಗಿ ಜನಪ್ರತಿನಿಧಿಗಳು, ಸಚಿವರು, ಕೇಂದ್ರ ಸಚಿವರು, ಆಸಕ್ತಿ ವಹಿಸಬೇಕು. ನಮ್ಮ ಸಂಸ್ಥೆ ವತಿಯಿಂದ ಹೋರಾಟ, ಜನಾಂದೋಲನ ನಿರಂತರವಾಗಿರಲಿದೆ ಎಂದರು.
ಅಂಜನಕುಮಾರ ಕಡೇಮನಿ, ರಾಜು ಮಸವಳ್ಳಿ ಇತರರು ಇದ್ದರು.