ವಿಜಯಪುರ ಕಸಾಪ ಸಭಾಭವನದಲ್ಲಿ ದೇವರಹಿಪ್ಪರಗಿಯ ಸದಯ್ಯನಮಠದ ವೀರಗಂಗಾಧರ ಶಿವಾಚಾರ್ಯರು ಸುದ್ದಿಗೋಷ್ಠಿ ನಡೆಸಿದರು. ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಸಿದ್ಧಲಿಂಗ ಮಹಾಸ್ವಾಮಿಗಳು, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮತ್ತಿತರರಿದ್ದಾರೆ.  
ಜಿಲ್ಲೆ

ಒಣದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹ

ವಿಜಯಪುರ: ಒಣದ್ರಾಕ್ಷಿಗೆ ಬೆಂಬಲ ಬೆಲೆ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿ ವಿವಿಧ ಮಠಾಧೀಶರು, ದ್ರಾಕ್ಷಿ ಬೆಳೆಗಾರರು ಹಾಗೂ ರೈತಪರ ಸಂಘಟನೆಗಳ ಸಮೂಹ ಬೃಹತ್ ಸಮಾವೇಶ ಹಮ್ಮಿಕೊಂಡಿದೆ ಎಂದು ದೇವರಹಿಪ್ಪರಗಿಯ ಸದಯ್ಯನಮಠದ ವೀರಗಂಗಾಧರ ಶಿವಾಚಾರ್ಯರು ಹೇಳಿದರು.

ಬರುವ ಸೆ. 7 ರಂದು ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ಸಮಾವೇಶ ನಡೆಯಲಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾಭಾಗಗಳ ದ್ರಾಕ್ಷಿ ಬೆಳೆಗಾರರು ಭಾಗವಹಿಸಲಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬೆಲೆ ಕುಸಿತದಿಂದ ಕಂಗಾಲಾಗಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಶಾಸಕರು, ಸಚಿವರು ಮತ್ತಿತರ ನಾಯಕರುಗಳನ್ನು ಭೇಟಿ ಮಾಡಲಾಗಿದೆ. ಆದರೂ, ಈವರೆಗೆ ಬೇಡಿಕೆ ಈಡೇರಿಲ್ಲ. ಹೀಗಾಗಿ ಸಮಾವೇಶದ ಮೂಲಕ ಸರ್ಕಾರವನ್ನು ಎಚ್ಚರಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ರತಿ ಕೆಜಿ ಒಣದ್ರಾಕ್ಷಿಗೆ ಕನಿಷ್ಠ 250 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಸರ್ಕಾರವೇ ನೇರವಾಗಿ ಖರೀದಿ ಮಾಡಬೇಕು. ಒಣದ್ರಾಕ್ಷಿಯು ಹಲವಾರು ಪೋಷಕಾಂಶಗಳುಳ್ಳ, ಔಷಧ ಗುಣವುಳ್ಳ ಪದಾರ್ಥವಾಗಿದೆ. ವಿಟಮಿನ್ ಬಿ6, ವಿಟಮಿನ್ ಸಿ, ಗ್ಲೂಕೋಸ್, ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಪೋಟ್ಯಾಷಿಯಂ, ಐರಾನ್ ಸೇರಿದಂತೆ 20ಕ್ಕೂ ಹೆಚ್ಚು ವಿಟಮಿನ್‌ಗಳು ಒಣದ್ರಾಕ್ಷಿಯಲ್ಲಿವೆ. ಒಣದ್ರಾಕ್ಷಿ ಸೇವಿಸುವುದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ವೃದ್ಧಿಯಾಗಲಿದೆ. ಪ್ರತಿ ನಿತ್ಯ ಅಂಗನವಾಡಿ, ಸರ್ಕಾರಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಇನ್ನಿತರ ಶಾಲಾ ಮಕ್ಕಳಿಗೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ, ದೇಶದ ಸೈನಿಕರಿಗೆ ಪ್ರತಿ ನಿತ್ಯ 50 ಗ್ರಾಂ ದ್ರಾಕ್ಷಿ ವಿತರಿಸಬೇಕು ಎಂದರು.

ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ದ್ರಾಕ್ಷಿ ಉತ್ಪಾದನೆಯಲ್ಲಿ ಇಡಿ ದೇಶದಲ್ಲಿಯೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಶೇ. 70 ರಷ್ಟು ಉತ್ಪಾದನೆಯಾಗುತ್ತಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಒಣದ್ರಾಕ್ಷಿ ಬೆಳೆಯಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ 1 ಲಕ್ಷ ರೈತ ಕುಟುಂಬಗಳು ದ್ರಾಕ್ಷಿ ಬೆಳೆಯನ್ನೇ ಅವಲಂಬಿಸಿವೆ. 15 ಕೋಟಿ ಮಾನವ ದಿನಗಳ ಕೆಲಸ ನೀಡುವ ಮೂಲಕ ವರ್ಷ ಪೂರ್ತಿ ಗ್ರಾಮೀಣ ಕೃಷಿ ಕಾರ್ಮಿಕರಿಗೆ ನಿರಂತರ ಉದ್ಯೋಗ ದೊರೆಯುತ್ತದೆ ಎಂದರು.

ಸಾಮಾನ್ಯ ಮಾರುಕಟ್ಟೆಯಲ್ಲಿ ಹಸಿ ದ್ರಾಕ್ಷಿಗೆ ಕೆಜಿಗೆ ರೂ.40-50 ಬೆಲೆ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ 15-20 ರೂಪಾಯಿಗೆ ಬೆಲೆ ಕುಸಿದಿದೆ. ಒಣದ್ರಾಕ್ಷಿ ಬೆಲೆ ಸದ್ಯಕ್ಕೆ 60 ರಿಂದ 110 ರೂಪಾಯಿಗೆ ಇಳಿದಿದೆ. 1 ಎಕರೆ ದ್ರಾಕ್ಷಿ ಬೆಳೆಯಲು 2.25 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈಗಿರುದ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದರು.

ಬಸವನಬಾಗೇವಾಡಿಯ ಸಿದ್ಧಲಿಂಗ ಮಹಾಸ್ವಾಮಿಗಳು, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಸಗರ, ಕಲ್ಲಪ್ಪ ಪಾರಶೆಟಟಿ, ರಾಮನಗೌಡ ಪಾಟೀಲ, ವಿಜಯಲಕ್ಷ್ಮಿ ಗಾಯಕವಾಡ ಮತ್ತಿತರರಿದ್ದರು.