ಧಾರವಾಡ: ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭೂ ಕಬಳಿಕೆ ವಿರೋಧಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಬಹುರಾಷ್ಟ್ರೀಯ ಕಂಪನಿಗಳ ಇಚ್ಛೆ ಮತ್ತು ಆಸೆಗಳನ್ನು ಪೂರೈಸಲು ವಿವಿಧ ರಾಜ್ಯ ಸರ್ಕಾರಗಳು ವಿವೇಚನೆ ಇಲ್ಲದೇ ರೈತರಿಂದ ಭೂಮಿ ಕಿತ್ತುಕೊಳ್ಳುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭೂ-ಕಬಳಿಕೆ ನೀತಿಯು ಬೆಂಕಿಗೆ ತುಪ್ಪ ಸುರಿಯುತ್ತಿದೆ. ಈಚೆಗೆ ಒಡಿಶಾ ಸರ್ಕಾರವು ಕಿಯೋಂಝಾರ್ ಜಿಲ್ಲೆಯ ಪಟಾನಾ ಬ್ಲಾಕ್‌ನಲ್ಲಿ 11 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಹಾಗೆ ಮಾಡಲು ಅವರು 16 ಹಳ್ಳಿಗಳನ್ನು ಸಂಪೂರ್ಣ ನಾಶಮಾಡಲಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಮತ್ತು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಸತ್ಯಸಾಯಿ ಜಿಲ್ಲೆಯಲ್ಲಿ 23 ಸಾವಿರ ಎಕರೆ ಕೃಷಿ ಭೂಮಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶ ಸರ್ಕಾರ ಮೊರಾದಾಬಾದ್ ಜಿಲ್ಲೆಯಲ್ಲಿ ಭೂಮಿ ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಉದಾಹರಣೆಗಳು ಮಂಜುಗಡ್ಡೆಯ ತುದಿಯಷ್ಟೇ. ಇದಲ್ಲದೆ ಈ ಸರ್ಕಾರಗಳು ಸಾಮಾನ್ಯ ಜನರ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಿವೆ. ಈ ಗಂಭೀರ ಪರಿಸ್ಥಿತಿ ಉದ್ಭವಿಸಿದೆ. ಈ ಸರ್ಕಾರಗಳು ತಮ್ಮ ಜನವಿರೋಧಿ ಭೂ-ಕಬಳಿಕೆ ನೀತಿ ಕೈಬಿಡಬೇಕು. ರೈತರು ಮತ್ತು ಕೃಷಿಕರು ಬದುಕುಳಿಯಲು ಸಾಧ್ಯವಾಗುವಂತೆ ರೈತಪರ ಕೃಷಿ ನೀತಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.
ದೀಪಾ ಧಾರವಾಡ, ಹನುಮೇಶ ಹುಡೇದ, ಶಿವಲಿಂಗಪ್ಪ ಉಣಕಲ್, ಕಲ್ಲಪ್ಪ ಬಾಡ, ದಿವಾಸಾಬ್ ತುಮಕಿ, ಕರಿಬಸಪ್ಪ ನೇಕಾರ, ಮಹಾದೇವಿ ಕಿತ್ತೂರು, ಶರಣು ಗೋನವಾರ, ರಮೇಜಾ ಇತರರಿದ್ದರು.