raichur 
ಜಿಲ್ಲೆ

ಮುಖಚಹರೆ ಗುರುತಿಸುವ ಕ್ರಮ ಕೈ ಬಿಡಲು ಒತ್ತಾಯ

Raichur - Reporter - Rachhai Swamy

ರಾಯಚೂರು ಕೇಂದ್ರ ಸರ್ಕಾರದ ಐಸಿಡಿಎಸ್ ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಅಕರ್ಷಿಸಲು ಮುಖಚಹರೆ ಗುರುತಿಸುವ ಕ್ರಮವನ್ನು ಕೂಡಲೇ ಕೈಬಿಡಲು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.


ಕೇಂದ್ರ ಸರ್ಕಾರದ ಐಸಿಡಿಎಸ್ ಯೋಜನೆಗೆ 50 ವರ್ಷಗಳು ಪೂರೈಸುತ್ತಿದ್ದು, ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಅದರ ಬದಲಾಗಿ ಸಂಕೀರ್ಣಗೊಳಿಸಲಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ಕೊಡದೇ ಮುಖಚಹರೆ ಗುರ್ತಿಸುವ ಕ್ರಮವನ್ನು ಅಳವಡಿಸಿದ್ದರಿಂದ ಕ್ಷೇತ್ರ ಮಟ್ಟದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ.

ಆಹಾರ ಭದ್ರತಾ ಕಾಯ್ದೆಯಡಿ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು, ಸುಪ್ರಿಂ ಕೋರ್ಡ್ ನಿರ್ದೇಶನದಂತೆ ಆಧಾರ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಹಾಗೂ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನು ಭವಿಗಳಿಗೆ ವಂಚನೆಯಾಗಬಾರದು, ಸಂರಕ್ಷಣೆ ಮಾಡಬೇಕಾದ ಸರ್ಕಾರಗಳು ಇಂದು ಮುಖಚಹರೆವನ್ನು ಕಡ್ಡಾಯಗೊಳಿಸುವ ಮುಖಾಂತರ ಫಲಾನುಭವಿಗಳ ಹಕ್ಕನ್ನು ನಿರಾಕರಿಸುತ್ತಿವೆ. ಮುಖಚಹರೆಯಿಂದ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ಸೈಬರ್‌ವಂಚನೆಗಳು ದಾರಿ ಮಾಡಿಕೊಟ್ಟಂತಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮುಖಚರಹರೆಯನ್ನು ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಗುಜರಾತ್ ಹೈಕೋರ್ಟ್‌ತೀರ್ಪಿನಂತೆ ಸಿ ಮತ್ತು ಡಿ ಗುಂಪಿನ ನೌಕರರೆಂದು ಪರಿಗಣಿಸಬೇಕು, 2018 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಿ, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಪದ್ಮಾ, ಕಾರ್ಯದರ್ಶಿ ನರ್ಮದಾ, ಖಜಾಂಚಿ ಗಂಗಮ್ಮ, ಶಾಂತ, ರಾಘಮ್ಮ, ಶರಣಮ್ಮ, ಸುನಿತಾ, ಶಾರದಾ, ಶಾಂತಮ್ಮ, ಮಲ್ಲಮ್ಮ, ಗೋಕುರಮ್ಮ, ಚಂದ್ರಮ್ಮ, ಇಂದ್ರಮ್ಮ, ಅಸ್ಮಿ, ರೇಹಮತ್, ಗೌರಮ್ಮ. ವೆಂಕಟಮ್ಮ, ಸಾವಿತ್ರಿ, ಮಮತಾ, ಕೆ.ವಿಜಯ, ನಾಗರತ್ನ ಸೇರಿ ಅನೇಕರು ಇದ್ದರು.