ಜಿಲ್ಲೆ

ರೈತರ ಸಭೆಗೆ ಆಗ್ರಹಿಸಿ ಬೀದಿಗಳಿದ ರೈತಸಂಘ

ಹರಿಹರ: ಹರಿಹರ ತಾಲೂಕು ರೈತರ ಸಭೆ ಕರೆಯುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಕಾರ್ಯಕರ್ತರು ಹರಿಹರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ರಸ್ತೆಯ ಪಕ್ಕಿರಸ್ವಾಮಿ ಮಠದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ವಿುಸಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮೆರವಣಿಗೆ ಉದ್ದಕ್ಕೂ ಸರ್ಕಾರದ ವಿರುದ್ಧ ಘೊಷಣೆ ಕೂಗಲಾಯಿತು. ರೈತರ ಹಿತರಕ್ಷಣೆಗೆ ದಾವಿಸುವಂತೆ ಆಗ್ರಹಿಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಮಾತನಾಡಿ, ರೈತರ ಜ್ವಲಂತ ಸಮಸ್ಯೆಗಳನ್ನುಪರಿಹರಿಸಲು ತಾಲೂಕು ಮಟ್ಟದ ಸಭೆ ಕರೆಯಬೇಕು. ಇಲ್ಲದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನಾದ್ಯಂತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಭ ್ರ ಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣ ನೀಡದಿದ್ದರೆ ಇ- ಸ್ವತ್ತು ನೀಡಲು ವಿಳಂಬ ಮಾಡುತ್ತಾರೆ. ಅನವಶ್ಯಕವಾಗಿ ರೈತರನ್ನು ಕಚೇರಿಗೆ ಅಲೆದಾಡಿಸುತ್ತಾರೆ. ಈ ಹಿನ್ನಲೆಯಲ್ಲಿ ಕೂಡಲೇ ಗ್ರಾಮ ಸಭೆ ಕರೆಯಲು ಯುವಂತೆ ಆಗ್ರಹಿಸಿದರು.

ಭತ್ತ, ರಾಗಿ, ಮೆಕ್ಕೆಜೋಳಕ್ಕೆ ಮುಂಗಾರು, ಹಿಂಗಾರು ಎನ್ನದೆ ಕೂಡಲೇ ವೈಜ್ಞಾನಿಕ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆದು 3,500 - 4,000 ರೂ. ಬೆಲೆ ನೀಡಬೇಕು. ಭದ್ರಾ ಅಣೆಕಟ್ಟಿನಲ್ಲಿ ಬೇಸಿಗೆ ಹಂಗಾಮಿಗೆ ಸಾಕಷ್ಟು ನೀರಿದ್ದರೂ ಕೊನೇ ಭಾಗದ ಜಮೀನಿಗೆ ನೀರು ಹರಿಸಲು ವಿಫಲವಾಗಿದೆ. ನೀರು ಹರಿಯದ ಜಮೀನುಗಳನ್ನು ಸರ್ವೆ ಮಾಡಿ ಪರಿಹಾರ ನೀಡುವಂತೆ ಒತ್ತಾಯಿಸಿದರು.

ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಮೈಕ್ರೋಫೈನಾನ್ಸ್​ಗಳ ದಬ್ಬಾಳಿಕೆ, ಕಿರುಕುಳ ತಪ್ಪಿಲ್ಲ. ಕೂಡಲೇ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಕೃಷಿಕರ ಮನವಿಗೆ ಸ್ಪಂದಿಸಿದ ಆಡಳಿತ: ಕೃಷಿಕರ ಒತ್ತಡಕ್ಕೆ ಮಣಿದ ತಾಲೂಕು ಆಡಳಿತ ಮುಂದಿನ ತಿಂಗಳು ಮೇ 5ರಂದು ತಾಲೂಕು ಮಟ್ಟದ ರೈತ ಮುಖಂಡರ ಸಭೆ ಕರೆಯಲು ನಿರ್ಧರಿಸಿತು.

ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಹಾಗೂ ಭೂಮಾನ ಇಲಾಖೆಯ ಎಡಿಎಲ್​ಆರ್ ನಾಗಭೂಷಣ್ ಮನವಿ ಸ್ವೀಕರಿಸಿ ಪ್ರತಿಭಟನಾಕಾರರ ಜತೆ ಮಾತನಾಡಿದ ಬಳಿಕ ಮೇ.5 ರಂದು ರೈತ ಮುಖಂಡರ ಸಭೆ ಕರೆಯುವ ಭರವಸೆ ನೀಡಿದರು. ಪಿಡಿಒಗಳ ಮೇಲಿನ ಆರೋಪಗಳ ಬಗ್ಗೆ ಲಿಖಿತ ರೂಪದಲ್ಲಿ ದೂರು ನೀಡುವಂತೆ ತಾಪಂ ಇಒ ಸುಮತಲಾ ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹಲಸಬಾಳು ಬಸವರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಡಿ.ಬಿ. ನಂದೀಶ್ , ಮುಖಂಡರಾದ ಪರಮೇಶ್ವರಪ್ಪ ನಂದಿತಾವರೆ, ರಾಘವೇಂದ್ರ, ಪರಮೇಶ್ವರಪ್ಪ ಕೆಂಚನಹಳ್ಳಿ, ಪರಮೇಶ್ವರಪ್ಪ ಭಾನುವಳ್ಳಿ, ರಂಗಣ್ಣ ಹಾಲಿವಾಣ, ಗದಿಗೆಪ್ಪ ಗೋವಿನಹಾಳ್, ಕೆ.ವಿ. ರುದ್ರಮುನಿ, ಪರಶುರಾಮಪ್ಪ ರಾಜನಹಳ್ಳಿ, ಕೆ.ಜಿ. ನಾಗಪ್ಪ, ಕೆ.ಎಚ್. ಮಾಲತೇಶ್ ಹಾಗೂ ಇತರರಿದ್ದರು.