ಜಿಲ್ಲೆ

ಪಿಡಿಒಗಳಿಗೆ ರಕ್ಷಣೆ ನೀಡುವಂತೆ ಒತ್ತಾಯ

ರಾಜಣ್ಣ

ಮಳವಳ್ಳಿ: ಗ್ರಾಮೀಣ ಮಟ್ಟದಲ್ಲಿ ನಿರ್ಭಿತಿಯಿಂದ ಕೆಲಸ ಮಾಡಲು ಗ್ರಾಪಂ ಪಿಡಿಒಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕು ಪಿಡಿಒಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


ಹಲಗೂರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಲ್ಲಿನ ಅಭಿವೃದ್ಧಿ ಅಧಿಕಾರಿಯನ್ನು ಜಾತಿನಿಂದನೆ ಮಾಡುವುದರ ಜತೆಗೆ ಹಲ್ಲೆಗೆ ಮುಂದಾಗಿದ್ದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಹಲಗೂರು ಪಿಡಿಒ ಸಿ.ರುದ್ರಯ್ಯ ಅವರನ್ನು ನ್ಯಾಯ ಸಮ್ಮತವಲ್ಲದ ಹಾಗೂ ಕಾನೂನು ಬಾಹಿರ ಬೇಡಿಕೆಗಳಿಗೆ ಸ್ಪಂದಿಸಿಲ್ಲವೆಂದು ಅ.4ರಂದು ಗ್ರಾಪಂ ಕಚೇರಿಯಲ್ಲಿ ಅಮಾನತು ಮಾಡಿಸುವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಸದಸ್ಯ ಸುರೇಂದ್ರ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.


ಅಭಿವೃದ್ಧಿ ಅಧಿಕಾರಿಗಳಿಗೆ ಮಾನಸಿಕ ಸ್ಥೈರ್ಯ ತುಂಬಿ ಗ್ರಾಪಂಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಿಕೊಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಪ್ರಸಾದ್‌ಕುಮಾರ್, ಖಜಾಂಚಿ ಲೋಕೇಶ್, ಪಿಡಿಒಗಳಾದ ಪಾರ್ಥಸಾರಥಿ, ಲಿಂಗರಾಜು, ಜಯಸ್ವಾಮಿ, ಯಶಸ್ವಿನಿ, ಕೃಷ್ಣ, ಮಹೇಶ್‌ಬಾಬು, ರೇಣುಕ, ನಟರಾಜು, ಮಹದೇವಮೂರ್ತಿ, ನಿಂಗಯ್ಯ ಇದ್ದರು.