ಜಿಲ್ಲೆ

ಹುಡಾ ಅಧ್ಯಕ್ಷ ಹುದ್ದೆಗೆ ಕಳಂಕಿತರನ್ನು ನೇಮಿಸದಂತೆ ಒತ್ತಾಯ

ಬೆಂಗಳೂರು: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಹುದ್ದೆಗೆ ಕಳಂಕಿತರನ್ನು ನೇಮಿಸದೆ ಉತ್ತಮ ಚಾರಿತ್ರ್ಯ ಹೊಂದಿರುವವರನ್ನು ಮಾತ್ರ ನಿಯೋಜಿಸಬೇಕು ಎಂದು ಮುಖ್ಯಮಂತ್ರಿಗೆ ಅರಕಗೂಡು ತಾಲ್ಲೂಕಿನ ವೈದ್ಯ ಡಾ. ಶ್ರೀನಾಥ್ ಚೌಡಪ್ಪ ಒತ್ತಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕುರುಬ ಸಮುದಾಯದ ಪಟೇಲ್ ಶಿವಪ್ಪ ಅವರನ್ನು ಹುಡಾ ಅಧ್ಯಕ್ಷ ಹುದ್ದೆಗೆ ನೇಮಿಸಲಾಗುತ್ತಿದೆ. ಇದನ್ನು ವಿರೋಧಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಾಸನ ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಗಮನಕ್ಕೂ ಈ ವಿಷಯ ತರಲಾಗಿದೆ ಎಂದರು.

ಪಟೇಲ್ ಶಿವಪ್ಪ ಅವರು ಹಾಸನ ಕುರುಬ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾಗ ನಡೆಸಿದ ಕನಕ ಭವನ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಅಕ್ರಮ ನಡೆಸಿದ್ದು, ಸರ್ಕಾರಕ್ಕೆ ವಂಚಿಸಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರ 4 ಕೋಟಿ ರೂ. ಅನುದಾನ ನೀಡಿತ್ತು. ಜತೆಗೆ ಸಂಘದ ಪ್ರತಿ ಸದಸ್ಯರಿಂದ 500 ರೂ. ವಸೂಲಿ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದರು. ಜತೆಗೆ ಅವರ ವಿರುದ್ಧದ ಇಲಾಖಾ ವಿಚಾರಣೆ ನಡೆದಿದ್ದು, ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣೆ ಪ್ರಕ್ರಿಯೆಯಲ್ಲಿದೆ. ಇದು ಪೂರ್ಣವಾಗುವವರೆಗೆ ಕಳಂಕಿತರನ್ನು ಯಾವುದೇ ಪ್ರಾಧಿಕಾರಕ್ಕೆ ನಾಮನಿರ್ದೇಶನ ಮಾಡಬಾರದು. ತಪ್ಪಿದ್ದಲ್ಲಿ ಹೋರಾಟ ಕೈಗೊಳ್ಳುವುದಾಗಿ ಡಾ. ಶ್ರೀನಾಥ್ ಚೌಡಪ್ಪ ಎಚ್ಚರಿಕೆ ನೀಡಿದ್ದಾರೆ.