ಮಂಗಳೂರು: ನಗರದ ಹೊರವಲಯದ ಅಡ್ಯಾರು-ನೀರುಮಾರ್ಗ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು 5 ದಶಕದಿಂದ ಬೇಡಿಕೆ ಸಲ್ಲಿಸಿ, ಮಂಜೂರಾತಿ ದೊರಕಿದ್ದರೂ ಈವರೆಗೂ ಈಡೇರಿಲ್ಲ. ಈ ಭಾಗದ ನಿವಾಸಿಗಳು ಇಂದಿಗೂ ಅನಧಿಕೃತ ರೈಲ್ವೆ ಕ್ರಾಸಿಂಗ್ ಮೂಲಕವೇ ಹಾದು ಹೋಗಬೇಕಾದ ಸ್ಥಿತಿ ಇದೆ.
ಅಡ್ಯಾರು ನಿವಾಸಿಗಳು ಲೆವೆಲ್ ಕ್ರಾಸಿಂಗ್‌ಗೆ ಒತ್ತಾಯಿಸಿ 5 ದಶಕದಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಡ್ಯಾರು ನೀರುಮಾರ್ಗ ರಸ್ತೆ ಹೋರಾಟ ಸಮಿತಿ ವತಿಯಿಂದ ಹಕ್ಕೊತ್ತಾಯ ಆರಂಭಿಸಿದ ವರ್ಷವೇ 1985ರಲ್ಲಿ ಆಗಿನ ರೈಲ್ವೆ ಸಚಿವ ಬನ್ಸೀಲಾಲ್ ಈ ಭಾಗಕ್ಕೆ ಕಾವಲು ಸಹಿತ ಲೆವೆಲ್ ಕ್ರಾಸಿಂಗ್ ಮಂಜೂರು ಮಾಡಿದ್ದರು. ಆಗ ಸಂಸದರಾಗಿದ್ದ ಜನಾರ್ದನ ಪೂಜಾರಿ ಅವರಿಗೆ ಬನ್ಸೀಲಾಲ್ ಬರೆದ ಪತ್ರ ಇದನ್ನು ದೃಢಪಡಿಸುತ್ತದೆ. ರೈಲ್ವೆ ತನ್ನ ಖರ್ಚಿನಲ್ಲೇ ಇದನ್ನು ನಿರ್ಮಿಸಲಿದೆ ಎಂದು ಪತ್ರ ಬರೆದಿದ್ದರು.
ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ರಾಮಚಂದ್ರ ರಾವ್ ಅವರಿಗೆ ಮದ್ರಾಸ್‌ನ ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಬರೆದ ಪತ್ರದಲ್ಲೂ ಲೆವೆಲ್ ಕ್ರಾಸ್ ಮಂಜೂರಾಗಿದ್ದು, ಮೈಸೂರು ವಿಭಾಗೀಯ ಪ್ರಬಂಧಕರು ಲೆವೆಲ್ ಕ್ರಾಸ್ ನಿರ್ಮಿಸಲಿದ್ದಾರೆ ಎಂದು ಉಲ್ಲೇಖಿಸಿದ್ದರು.
ಆಗ ರೈಲ್ವೆ ಹಳಿ ಪರಿವರ್ತನೆಯ ಕಾಲ. ಮೀಟರ್‌ಗೇಜ್ ಕಳಚಿ ಬ್ರಾಡ್‌ಗೇಜ್ ಮಾಡುವ ಕೆಲಸ ಆರಂಭವಾಗಿತ್ತು. ಬ್ರಾಡ್‌ಗೇಜ್ ಪೂರ್ಣವಾಗುವಾಗ ಲೆವೆಲ್ ಕ್ರಾಸಿಂಗ್ ಹಾಕುತ್ತೇವೆ ಎಂದು ರೈಲ್ವೆಯವರು ಹೇಳುತ್ತಾ ಕಾಲಕ್ಷೇಪ ಮಾಡಿದರು. ರೈಲ್ವೆ ಕ್ರಾಸಿಂಗ್ ಬಗ್ಗೆ ನೆನಪಿಸಿ ಪತ್ರ ಬರೆಯುತ್ತಿದ್ದರು. ಆದರೆ ಈವರೆಗೆ ಕ್ರಾಸಿಂಗ್ ನಿರ್ಮಾಣ ಆಗಿಲ್ಲ.
ರೈಲ್ವೆ ಲೆವೆಲ್ ಕ್ರಾಸಿಂಗ್ ಬದಲಾಗಿ ಅಂಡರ್ ಪಾಸ್ ನಿರ್ಮಾಣ ಪ್ರಸ್ತುತ ಪ್ರಸ್ತಾವನೆಯಲ್ಲಿದೆ. ರೈಲ್ವೆ ಇಲಾಖೆ ಇದಕ್ಕೆ ಅನುದಾನ ನೀಡುವುದಿಲ್ಲ. ಶಾಸಕರ, ಸಂಸದರ ನಿಧಿ ಹಾಗೂ ಗ್ರಾಮ ಪಂಚಾಯಿತಿ ಅನುದಾನ ನೀಡಬೇಕು. ಆದರೆ ಗ್ರಾಪಂನಲ್ಲಿ ಅಷ್ಟೊಂದು ಹಣ ಇಲ್ಲದೆ ಇರುವುದರಿಂದ ಇನ್ನೂ ಯೋಜನೆ ಸಾಕಾರವಾಗಿಲ್ಲ.
ಮುಚ್ಚಲು ಯತ್ನ: 2007ರಲ್ಲಿ ರೈಲ್ವೆಯವರು ಅಡ್ಯಾರು-ನೀರುಮಾರ್ಗ ರಸ್ತೆಯ ರೈಲ್ವೆ ಕ್ರಾಸಿಂಗ್‌ನ್ನು ರದ್ದುಗೊಳಿಸಿ ಈ ಭಾಗದಲ್ಲಿ ಬೇಲಿ ಹಾಕಲು ಮುಂದಾಗಿದ್ದರು. ಆದರೆ ಸ್ಥಳೀಯರು ಪ್ರತಿಭಟಿಸಿದ್ದರು. ಆಗ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಆಗಿನ ಜಿಲ್ಲಾಧಿಕಾರಿ ಪೊನ್ನುರಾಜ್ ಆಗಮಿಸಿ ರೈಲ್ವೆಯವರನ್ನು ತರಾಟೆಗೆ ತೆಗೆದುಕೊಂಡಿದ್ದರು. ರಸ್ತೆ ಬಂದ್ ಮಾಡದಂತೆ ಆದೇಶಿಸಿದ್ದರು. 2013ರಲ್ಲೂ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಮರುದಿನ ರಸ್ತೆ ಮುಚ್ಚಲು ಮುಂದಾಗಿದ್ದರು. ಆಗ ಸಂಸದ ನಳಿನ್ ಕುಮಾರ್ ಕಟೀಲು ಆಗಮಿಸಿ ರಸ್ತೆ ಮುಚ್ಚದಂತೆ ಸೂಚಿಸಿದ್ದರು.
ಅಡ್ಯಾರಿನಿಂದ ನೀರುಮಾರ್ಗ ಮಧ್ಯೆ ಕೆಮ್ಮಂಜೂರು, ವಳಚ್ಚಿಲ್, ತಬಿಪೊಡಿ, ಕಾನ, ಮಾಜೂರು, ಅಡ್ಯಾರುಪದವು ಮೊದಲಾದ ಊರುಗಳಿದ್ದು, ಸಾವಿರಾರು ಮಂದಿಗೆ ಇದುವೇ ಸಂಪರ್ಕ ರಸ್ತೆ. ಹಳಿಯ ಇಕ್ಕೆಲಗಳಲ್ಲಿ ಸುಮಾರು 100 ಮೀ. ರಸ್ತೆ ಕಚ್ಚಾ ಆಗಿದ್ದು, ಡಾಂಬರು ಹಾಕಲು ರೈಲ್ವೆ ಇಲಾಖೆ ಬಿಡುತ್ತಿಲ್ಲ.
ಮೂರಕ್ಕೂ ಅಧಿಕ ಜೀವ ಬಲಿ: ಈ ಲೆವೆಲ್ ಕ್ರಾಸಿಂಗ್‌ನಲ್ಲಿ ಒಟ್ಟು ಮೂರಕ್ಕಿಂತ ಅಧಿಕ ಜೀವ ಬಲಿಯಾಗಿವೆ. 2013ರಲ್ಲಿ ಮದುವೆ ದಿಬ್ಬಣದ ಟೆಂಪೋ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟು, ಐವರು ಗಾಯಗೊಂಡಿದ್ದರು. ಕೆಲ ವರ್ಷಗಳ ಹಿಂದೆ ಮಿತ್ರದಾಸ್ ಎಂಬುವರು ತಮ್ಮ ಸ್ನೇಹಿತನೊಡನೆ ಹಳಿ ದಾಟುವಾಗ ಬೆಂಗಳೂರು ಕಡೆಯಿಂದ ಬಂದ ಪ್ಯಾಸೆಂಜರ್ ರೈಲು ಬಡಿದಿತ್ತು. ಮಿತ್ರದಾಸ್ ಬೈಕ್ ಹಿಂದೆ ಕುಳಿತವರು ಬಂಡೆಯೊಂದಕ್ಕೆ ಅಪ್ಪಳಿಸಿ ಮೃತಪಟ್ಟಿದ್ದರು. ಅದಕ್ಕೂ ಮೊದಲು ಪಾದಚಾರಿಯೊಬ್ಬರು ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದರು.
ಅಡ್ಯಾರು-ನೀರುಮಾರ್ಗ ರೈಲ್ವೆ ಕ್ರಾಸಿಂಗ್ ಅಪಾಯಕಾರಿಯಾಗಿದೆ. ಇಲ್ಲಿ ಹಗಲಿನ ವೇಳೆ ಗಾರ್ಡ್‌ಗಳಿದ್ದು, ರಾತ್ರಿ ವೇಳೆ ಯಾರೂ ಇರುವುದಿಲ್ಲ. ಸಾವಿರಾರು ಮಂದಿ ಇಲ್ಲಿ ಸಂಚರಿಸುವುದರಿಂದ ಇಲ್ಲಿಗೆ ಅಂಡರ್‌ಪಾಸ್ ಅವಶ್ಯವಾಗಿದ್ದು, ಶೀಘ್ರ ನಿರ್ಮಾಣ ಮಾಡಬೇಕಾಗಿದೆ.
ಸುರೇಶ್ ಕುಮಾರ್, ನಿತ್ಯ ಸಂಚಾರಿ
ಅಡ್ಯಾರು ರೈಲ್ವೆ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮುಂಬರುವ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನಳಿನ್ ಕುಮಾರ್ ಕಟೀಲು, ಸಂಸದ