ಕೂಡ್ಲಿಗಿ: ಸರ್ಕಾರ ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ನಮ್ಮ ಕೆಲಸವನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಈರಮ್ಮ ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲರಿಗೆ ಬರೆದ ಪತ್ರವನ್ನು ಶಾಸಕ ಎನ್.ವೈ. ಗೋಪಾಲಕೃಷ್ಣರಿಗೆ ಬುಧವಾರ ಸಲ್ಲಿಸಿ ಮಾತನಾಡಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈಗಿರುವ ಮಾಸಿಕ ಗೌರವ ಧನವನ್ನು 12 ಸಾವಿರ ರೂ.ಗೆ ಹೆಚ್ಚಿಸಬೇಕು. ಆಗಾಗ ಆಶಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ನಡೆಸಬೇಕು ಹಾಗೂ ಅಗತ್ಯ ಬಿದ್ದಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಮುಖಗವಸು, ಕೈಗವಚ, ಸ್ಯಾನಿಟೈಸರ್ ಇತ್ಯಾದಿಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ತಿಂಗಳು 10ರಿಂದ ನಮ್ಮ ಕೆಲಸ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ತಾಲೂಕು ಅಧ್ಯಕ್ಷೆ ಬಿ. ನಾಗಮ್ಮ, ಪವಿತ್ರಾ, ಮಂಗಳಮ್ಮ, ಪುಷ್ಪಾ, ಜಯಲಕ್ಷೀ, ಗಂಗಮ್ಮ, ನಿರ್ಮಲ ಸೇರಿದಂತೆ ಅನೇಕರು ಇದ್ದರು.