ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜು ಮತ್ತು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಬೇಕೆಂದು ಒತ್ತಾಯಿಸಿ ಬುಧವಾರ ಆರ್‌ಸಿಯು ಕುಲಪತಿ ರಾಮಚಂದ್ರೇಗೌಡ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಆರ್‌ಸಿಯು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಯಪುರ, ಬಾಗಲಕೋಟೆ, ಜಮಖಂಡಿಗಳ ಸ್ನಾತಕೋತ್ತರ ಕೇಂದ್ರಗಳು ಹಾಗೂ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 80ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ಗೌರವಧನ ಹೆಚ್ಚಿಸಬೇಕು. ಕಳೆದ ಶೈಕ್ಷಣಿಕ ವರ್ಷದಲ್ಲಿನ ಪರೀಕ್ಷಾ ಸಂಬಂಧಿತ ಕಾರ್ಯ ಮತ್ತು ಇತರ ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಕಾರ್ಯಗಳನ್ನು ನಿರ್ವಹಿಸಿದ ಅತಿಥಿ ಉಪನ್ಯಾಸಕರ ಬಾಕಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನ ಅವಧಿಯಲ್ಲಿ ಕೋವಿಡ್ ಸೇವೆ ಎಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿವೇಶನದಲ್ಲಿ ತಿಳಿಸಿದ್ದು, ವಿವಿಯ ಅತಿಥಿ ಉಪನ್ಯಾಸಕರಿಗೂ ಮೂರು ತಿಂಗಳ ವೇತನ ನೀಡಬೇಕು. ಕಳೆದ ವರ್ಷ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕೆಆರ್‌ಎಂಎಸ್‌ಎಸ್ ಆರ್‌ಸಿಯು ಘಟಕದ ಕಾರ್ಯದರ್ಶಿ ಬಿ.ಎಂ. ಬಡಿಗೇರ, ಡಾ. ಎಸ್.ಬಿ. ರಾಯನಗೌಡರ್, ಮಹಾದೇವ ಧರಿಗೌಡರ ಮತ್ತು ಸಚಿನ ಹಿರೇಮಠ ಇತರರಿದ್ದರು.