ಜಿಲ್ಲೆ

ಸಾಲಿಗ್ರಾಮ ಒಳಪೇಟೆ ಅಗಲೀಕರಣಕ್ಕೆ ಆಗ್ರಹ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಒಳಪೇಟೆ ಅಗಲೀಕರಣಗೊಳ್ಳಬೇಕು. ಈ ಬಗ್ಗೆ ಇನ್ನಷ್ಟು ಸಮಸ್ಯೆ ಸೃಷ್ಟಿಸಿ ಮತ್ತೆ ಅಗಲೀಕರಣದ ಪ್ರಕ್ರಿಯೆ ವಿಳಂಬಗೊಳಿಸಬೇಡಿ. ಪ್ರತಿಬಾರಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಒಳಪೇಟೆ ಅಗಲೀಕರಣದ ವಿಷಯ ಅಜೆಂಡಾದಲ್ಲಿ ಪ್ರಸ್ತಾಪಿಸಲಾಗುತ್ತದೆ. ಆದರೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸದಸ್ಯರು ಆಗ್ರಹಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಹಾಗೂ ಆಡಳಿತ ಪಕ್ಷದ ಸದಸ್ಯ ಶ್ಯಾಮಸುಂದರ್ ನಾಯರಿ ವಿಷಯ ಪ್ರಸ್ತಾಪಿಸಿ, ಅಭಿವೃದ್ಧಿಯತ್ತ ಹೆಜ್ಜೆ ಇಡೋಣ ಎಂದರು. ಇದಕ್ಕೆ ಉತ್ತರಿಸಿದ ಪ.ಪಂ. ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ರಸ್ತೆ ಫುಟ್‌ಪಾತ್ ತೆರವು ಕಾರ್ಯಕ್ಕೆ ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದು ಜಿಲ್ಲಾಧಿಕಾರಿ ಒಂದೆರಡು ದಿನಗಳೊಳಗೆ ಚಿತ್ರಣ ನೀಡಲಿದ್ದಾರೆ. ಶೀಘ್ರವೇ ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ರಾವ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೃದಯಾಘಾತ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತದೆ ಈ ಬಗ್ಗೆ ಪಪಂ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದರು. ಕಳವು ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ವಿಪಕ್ಷ ಸದಸ್ಯ ಶ್ರೀನಿವಾಸ ಅಮೀನ್ ಇಲಾಖೆಯನ್ನು ಪ್ರಶ್ನಿಸಿದರು. ಕೋಟ ಆರಕ್ಷಕ ಠಾಣೆಯ ಎಎಸ್‌ಐ ರವಿ ಕುಮಾರ್ ಉತ್ತರಿಸಿ, ಈ ಬಗ್ಗೆ ಇಲಾಖೆ ತನಿಖೆ ಚುರುಕುಗೊಳಿಸಿದ್ದು ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಲಹೆ ನೀಡಿದರು. ಮುಖ್ಯಾಧಿಕಾರಿ ಕಚೇರಿಯಲ್ಲಿರುವ ಅಪ್ಪಣೆ ವಿನಾ ಪ್ರವೇಶವಿಲ್ಲ ಎಂಬ ಬೋರ್ಡ್ ತೆಗೆಯಬೇಕೆಂದು ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಹೇಳಿದರು. ಇದಕ್ಕೆ ಸಮ್ಮತಿಸಿದ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ಕಚೇರಿಯಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ಏಕಾಏಕಿ ಬರುತ್ತಾರೆ. ಅದಕ್ಕಾಗಿ ಬೋರ್ಡ್ ಹಾಕಲಾಗಿತ್ತು. ತೊಂದೆಯಾಗುವುದಾದರೆ ತೆಗೆಯೋಣ ಎಂದರು. ಸಾಲಿಗ್ರಾಮ ಪಪಂಗೆ ವಾರಾಹಿ ನೀರು ಬಳಕೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಾರಂಪಳ್ಳಿ ಪಡುಕರೆಯಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ ಇದ್ದರು.

ಕಳಪೆ ಆಹಾರಕ್ಕೆ ಕಡಿವಾಣ ಹಾಕಿ

ಸಾಲಿಗ್ರಾಮ ಪಪಂ ವ್ಯಾಪ್ತಿಯಲ್ಲಿ ಕಳಪೆ ಆಹಾರ, ಜಂಕ್ ಫುಡ್ ಅತಿಯಾಗಿ ಮೇಳೈಸುತ್ತಿದೆ. ಆಹಾರಕ್ಕೆ ಕಳಪೆ ಎಣ್ಣೆ ಬಳಕೆ, ಹೊಟೇಲ್‌ಗಳಲ್ಲಿ ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿಕೊಡುವುದನ್ನು ನಿಲ್ಲಿಸಿಬೇಕು. ಕಳಪೆ ಆಹಾರದ ಬಗ್ಗೆ ಆಹಾರ ಇಲಾಖೆಗೆ ಪಟ್ಟಣ ಪಂಚಾಯಿತಿ ತಿಳಿಸಬೇಕು ಎಂದು ಆಡಳಿತ ಪಕ್ಷದ ರಾಜು ಪೂಜಾರಿ, ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಸಲಹೆ ನೀಡಿದರು. ಮುಖ್ಯಾಧಿಕಾರಿಗಳು ಉತ್ತರಿಸಿ ಆಹಾರಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ಗೆ ವರದಿ ನೀಡಲು ನಿರ್ದೇಶನ ನೀಡಲಾಗುವುದು ಎಂದರು.

ದಾರಿದೀಪದ ಬಗ್ಗೆ ನಿರ್ಲಕ್ಷ್ಯ ಏಕೆ?

ಪಟ್ಟಣ ಪಂಚಾಯಿತಿ ಮೂಲಸೌಕರ್ಯಗಳ ಬಗ್ಗೆ ನಿರ್ಲಕ್ಷೃದ ಧೋರಣೆ ಸಲ್ಲದು. ಕಾರ್ಕಡ ಭಾಗದಲ್ಲಿ 20ಕ್ಕೂ ಅಧಿಕ ದಾರಿದೀಪಗಳು ಉರಿಯುತ್ತಿಲ್ಲ. ಕೂಡಲೇ ದೀಪಗಳನ್ನು ಸರಿಮಾಡಬೇಕು ಎಂದು ಸದಸ್ಯ ರಾಜು ಪೂಜಾರಿ ಆಗ್ರಹಿಸಿದರು. ಬೀದಿದೀಪಗಳ ನಿರ್ವಾಹಕರನ್ನು ಸಭೆಗೇ ಕರೆಸಿದ ಮುಖ್ಯಾಧಿಕಾರಿಗಳು, ಬೀದಿದೀಪಗಳ ಬಗ್ಗೆ ನಿರ್ಲಕ್ಷೃ ವಹಿಸಬೇಡಿ. ಕೂಡಲೇ ಸರಿಪಡಿಸಿ, ಮುಂದೆ ಹೀಗಾದರೆ ಗುತ್ತಿಗೆಯನ್ನು ಹಿಂಪಡೆಯುವುದಾಗಿ ಎಚ್ಚರಿಸಿದರು.