ಜಿಲ್ಲೆ

ವಾರ್ಡ್ ಸಮಿತಿ ರಚನೆ, ಮನೆ-ನಿವೇಶನಕ್ಕೆ ಆಗ್ರಹ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಾರ್ಡ್ ಸಮಿತಿ ರಚನೆಗೆ ಹು-ಧಾ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿದೆ. ಆಶ್ರಯ ಬಡಾವಣೆಗಳಲ್ಲಿ ಮೂಲ ನಿವಾಸಿಗಳ ಬದಲಿಗೆ ಬೇರೆಯವರಿಗೆ ಮನೆ ಹಂಚಿಕೆ ಮಾಡಲಾಗಿದೆ. ಗೋಕುಲ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪಾಲಿಕೆ ವಿಫಲವಾಗಿದೆ ಎಂಬಿತ್ಯಾದಿ ದೂರುಗಳು ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಕೇಳಿ ಬಂದವು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು.

ಹು-ಧಾ ವಾರ್ಡ್ ಸಮಿತಿ ಬಳಗದ ವಿನಾಯಕ ತಾಪಸ್, ಶಿವಶಂಕರ ಐಹೊಳೆ ಹಾಗೂ ಇತರರು ಸೇರಿ, ನಾವು ಇದೀಗ 5ನೇ ಬಾರಿ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸುತ್ತಿದ್ದೇವೆ. ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರೂ ಮಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆಯೇ ವಾರ್ಡ್ ಸಮಿತಿಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಹು-ಧಾ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿದೆ. 10 ಸದಸ್ಯ ಸ್ಥಾನ ಹಾಗೂ ಮೀಸಲಾತಿಗೆ ತಕ್ಕಂತೆ ಅರ್ಜಿಗಳು ಸಲ್ಲಿಕೆಯಾಗಿರುವ ವಾರ್ಡ್​ಗಳಲ್ಲಿ ಸಮಿತಿ ರಚನೆಗೆ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿ ವಾರ್ಡ್ ಸಮಿತಿಗೆ ಮೀಸಲಾತಿಗೆ ಅನುಗುಣವಾಗಿ 10 ಸದಸ್ಯರನ್ನು ಆಯ್ಕೆ ಮಾಡಬೇಕು. ಆದರೆ, ಅದಕ್ಕೆ ತಕ್ಕಂತೆ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಇದೀಗ ಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ 3ನೇ ಬಾರಿ ಅರ್ಜಿ ಆಹ್ವಾನಿಸಿದ್ದೇವೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವಿವರಿಸಿದರು.

ಈಗಾಗಲೇ ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಿ ನಿಯಮಾನುಸಾರ ಹಾಗೂ ಮೀಸಲಾತಿಗೆ ಅನುಗುಣವಾಗಿ 10 ಸಂಖ್ಯೆಯಲ್ಲಿ ಅರ್ಹ ಸದಸ್ಯರು ಇರುವ ವಾರ್ಡ್​ಗಳಲ್ಲಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳಿ ಎಂದು ಸಚಿವ ಸಂತೋಷ ಲಾಡ್, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.