ಶ್ರೀರಂಗಪಟ್ಟಣ ಹೊರವಲಯದ ಪಶ್ಚಿಮ ವಾಹಿನಿಯ ಕಾವೇರಿ ನದಿ ತಟದಲ್ಲಿ ಹಿಂದು ಜಾಗರಣ ವೇದಿಕೆ ಹಾಗೂ ವೀರ ಮದಕರಿ ನಾಯಕ ಸಂಘಟನೆಗಳ ಪದಾಧಿಕಾರಿಗಳು ಮದಕರಿ ನಾಯಕರ 242ನೇ ಪುಣ್ಯ ಸ್ಮರಣೆಯನ್ನು ಆಚರಿಸಿದರು. ಪುರಸಭೆ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು ಹಾಗೂ ಮುಖಂಡ ಚಂದನ್ ಇದ್ದರು. 
ಜಿಲ್ಲೆ

ಮದಕರಿ ನಾಯಕರ ಅಧ್ಯಯನ ಕೇಂದ್ರ ತೆರೆಯಲಿ

ವಸಂತಕುಮಾರ್ ಬಿ

ಶ್ರೀರಂಗಪಟ್ಟಣ: ಪಟ್ಟಣದ ಕಾವೇರಿ ತಟದಲ್ಲಿ ದಹನಗೊಂಡ ವೀರ ಮದಕರಿ ನಾಯಕರ ನೆನಪಿಗಾಗಿ ಸ್ಮಾರಕ ನಿರ್ಮಾಣ ಹಾಗೂ ಈ ಬಗ್ಗೆ ಜನರ ಮಾಹಿತಿಗೆ ಪಟ್ಟಣದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಚಾಲಕ ಚಂದನ್ ಒತ್ತಾಯಿಸಿದರು.

ಪಟ್ಟಣ ಹೊರವಲಯದ ಪಶ್ಚಿಮವಾಹಿನಿಯಲ್ಲಿ ಬುಧವಾರ ಹಿಂದು ಜಾಗರಣ ವೇದಿಕೆ ಹಾಗೂ ತುಮಕೂರಿನ ವೀರ ಮದಕರಿ ನಾಯಕ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮದಕರಿ ನಾಯಕರ 242ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕಳೆದ 2016ರಿಂದ ಸತತವಾಗಿ ಪಶ್ಚಿಮವಾಹಿನಿಯ ಕಾವೇರಿ ತೀರದಲ್ಲಿ ಮದಕರಿ ನಾಯಕ ಅವರ ಪುಣ್ಯಸ್ಮರಣೆ ಆಚರಿಸುವ ಜತೆಗೆ ಅವರ ಅಂತ್ಯಕ್ರಿಯೆ ನೆರವೇರಿದ ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ. ಟಿಪ್ಪು ಸುಲ್ತಾನನ ಮೋಸದಿಂದ ಬಂಧಿಯಾದ ವೀರ ಮದಕರಿ ನಾಯಕರನ್ನು ಚಿತ್ರದುರ್ಗದಿಂದ ಕರೆ ತಂದು ಶ್ರೀರಂಗಪಟ್ಟಣದ ಜೈಲಿನಲ್ಲಿ ಇರಿಸಲಾಗಿತ್ತು. ಸೆರೆವಾಸದಲ್ಲಿದ್ದ ನಾಯಕರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲಾಯಿತು. ಅಂತ್ಯಕ್ರಿಯೆಯನ್ನು ಪಶ್ಚಿಮವಾಹಿನಿಯಲ್ಲಿ ನಡೆಸಲಾಗಿದೆ ಎಂದು ಇತಿಹಾಸ ನಮಗೆ ತಿಳಿಸುತ್ತದೆ. ಆದ್ದರಿಂದ ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನಾಡಿನ ಜನರು ಹಾಗೂ ಪ್ರವಾಸಿಗರಿಗೆ ತಿಳಿಸಿಕೊಡಲು ಜಿಲ್ಲಾಡಳಿತ ರಾಜ್ಯ ಸರ್ಕಾರದ ನೆರವಿನೊಂದಿಗೆ ಅಧ್ಯಯನ ಕೇಂದ್ರ ತೆರಯಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು ಚಿತ್ರದುರ್ಗದ ಧರ್ಮ ಜಾಗೃತಿ ಸೇನೆ ಮುಖಂಡ ವಕೀಲ ಪ್ರಸನ್ನ, ತಮಕೂರಿನ ಮದಕರಿ ನಾಯಕ ಸೇನೆ ಜಿಲ್ಲಾಧ್ಯಕ್ಷ ಪ್ರಕಾಶ್, ಮುಖಂಡ ಧನುಷ್, ಹಿಂದು ಜಾಗರಣಾ ವೇದಿಕೆಯ ಮಂಡ್ಯ ಜಿಲಾ ್ಲಸಮಿತಿ ಸದಸ್ಯ ರಾಂಪುರ ಶ್ಯಾಂ, ಪದಾಧಿಕಾರಿಗಳಾದ ದರಸಗುಪ್ಪೆ ಸತೀಶ್, ಗಿರೀಶ್, ರಾಜು, ಜೈಶ್ರೀರಾಂ ರವಿ, ಕಿರಂಗೂರು ಸತೀಶ್ ಮತ್ತಿತರರಿದ್ದರು.