ಮದ್ದೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ಮಾಡಲಾಯಿತು.
ಸಂಘದ ಕಾರ್ಯದರ್ಶಿ ವಿ.ಶಿವಕುಮಾರ್ ಮಾತನಾಡಿ, ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಅದೇಶ ವಾಪಸ್ ಪಡೆಯಬೇಕು. ಹೈಕೋರ್ಟ್ ಅದೇಶದಂತೆ 2021 ರ ಅಧಿಸೂಚನೆ ಅನ್ವಯಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022, 23 ಹಾಗೂ 24 ನೇ ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು ಎಂದು ಒತ್ತಾಯಿಸಿದರು.
ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೆ ಕಾರ್ಡು ವಿತರಣೆ ಮಾಡಬೇಕು. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆಗೊಳಿಸಿ, ಪಿಂಚಣಿ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಖರೀದಿಗಳಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಹೊಸ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆ ಸರಿಪಡಿಸಬೇಕು. ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ಉಳಿಸಿ, ಬಲಪಡಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಬೇರೆ ಉದ್ದೇಶಗಳಿಗೆ ವಿನಿಯೋಗಿಸಬಾರದು. ಕಾರ್ಮಿಕರ ವಿವಾಹ ಪ್ರೋತ್ಸಾಹ ಧನವನ್ನು ಶೀಘ್ರವಾಗಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಹಾಗೂ ಕಾರ್ಮಿಕನಿರೀಕ್ಷಕಿ ನಾಗರತ್ನ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಗೂ ಮುನ್ನ ಪಟ್ಟಣದ ಸಂಘದ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ತಾಲೂಕು ಕಚೇರಿಗೆ ಆಗಮಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಪಾಪಚಾರಿ, ತಾಲೂಕು ಸಂಚಾಲಕ ಪ್ರದೀಪ್, ಖಜಾಂಚಿ ಸಿ.ಡಿ.ಆನಂದ್, ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಎ.ಕುಮರ್, ಶಿವಣ್ಣ, ಬಾಬು, ಶಂಕರ್, ಚಂದ್ರಶೇಖರ್, ಸುರೇಶ್, ಕೃಷ್ಣ, ಎಂ.ಪಿ.ಮಹೇಶ್, ಮುತ್ತುರಾಜು, ಶಿವರಾಮು ಇದ್ದರು.