ಮುದ್ದೇಬಿಹಾಳ: ತಾಲೂಕಿನ ನಾಲತವಾಡದ ಹೆಸ್ಕಾಂ ಶಾಖೆಯ ಪ್ರಭಾರ ಶಾಖಾಧಿಕಾರಿ ಅಲ್ತಾಪ್ ಕಿತ್ತೂರ ಅವರು ಹೆಸ್ಕಾಂ ನಿಯಮ ಗೊತ್ತಿಲ್ಲದೆ ಮನಸ್ಸಿಗೆ ಬಂದಂತೆ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬೇರೆಡೆ ವರ್ಗಾಯಿಸಿ ಅರ್ಹ ಶಾಖಾಧಿಕಾರಿ ನೇಮಿಸಬೇಕು ಎಂದು ಆಗ್ರಹಿಸಿ ನಾಗರಬೆಟ್ಟ ಗ್ರಾಮಸ್ಥರು ಶುಕ್ರವಾರ ಇಲ್ಲಿನ ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.
ನಾಲತವಾಡ ಶಾಖೆಗೆ ಎಇ ಪೋಸ್ಟ್ ಆದೇಶವಿದೆ. ಈ ಆದೇಶ ಮೀರಿ ಮೀಟರ್ ರೀಡರ್ ಆಗಿರುವ ಕಿತ್ತೂರ ಅವರನ್ನು ಪ್ರಭಾರ ಶಾಖಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಶಾಖಾಧಿಕಾರಿ ಕರ್ತವ್ಯ, ಹೆಸ್ಕಾಂ ನಿಯಮ ಗೊತ್ತಿಲ್ಲದ ಇವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಟಿಸಿ ಸುಟ್ಟರೆ ಬದಲಾಯಿಸಲು ರೈತರಿಂದಲೇ ಹಣ ವಸೂಲಿ ಮಾಡುತ್ತಾರೆ. ಹಣ ಕೊಡದಿದ್ದರೆ ಟಿಸಿ ಬದಲಾಯಿಸದೆ ನೆಪ ಹೇಳಿ ರೈತರನ್ನು ಯಾಮಾರಿಸುತ್ತಾರೆ.
ನಿರಂತರ ಜ್ಯೋತಿ ಅಡಿ 24 ಗಂಟೆ ವಿದ್ಯುತ್ ಪೂರೈಸುವಲ್ಲಿ ವಿಲರಾಗಿದ್ದಾರೆ. ಮಳೆ, ಗಾಳಿ ಪ್ರಾರಂಭವಾದರೆ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಬಂದ್ ಮಾಡುತ್ತಾರೆ.
ಗಾಳಿಗೆ ತಂತಿ ಹರಿದರೆ, ಕಂಬ ಬಿದ್ದರೆ ಬೇಗ ದುರಸ್ತಿ ಮಾಡುವುದಿಲ್ಲ. ಈ ಕುರಿತು ಗ್ರಾಮಸ್ಥರು ಕೇಳಲು ಹೋದರೆ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಾರೆ.
ನಾನೊಬ್ಬ ಶಾಖಾಧಿಕಾರಿಯಿದ್ದು ಲೈನ್ಮನ್ ಕೆಲಸ ಮಾಡಲೇನು ಎಂದು ಸೊಕ್ಕಿನಿಂದ ಮಾತನಾಡುತ್ತಾರೆ. ರಾಜಕಾರಣಿಗಳ ಹೆಸರು ಬಳಸಿ ನನ್ನ ಬೆಂಬಲಕ್ಕೆ ಮೇಲಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಇದ್ದಾರೆ ಎಂದು ಬೆದರಿಸುತ್ತಾರೆ.
ಸ್ಥಳಿಯನಾಗಿರುವ ನನಗೆ ಜನರ ಬೆಂಬಲವಿದೆ ನೀವೇನು ಮಾಡ್ತೀರಿ ಎಂದು ದಬಾಯಿಸುತ್ತಾರೆ. ಇದು ರೈತರು, ಗ್ರಾಮಸ್ಥರ ಅಸಹನೆಗೆ ಕಾರಣವಾಗಿದ್ದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿದೆ.
ಇವರನ್ನು ವರ್ಗ ಮಾಡಿ ಶಾಖಾಧಿಕಾರಿ ಹುದ್ದೆಗೆ ಒಳ್ಳೇ ಅಧಿಕಾರಿ ನೇಮಿಸಬೇಕು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ನಾಲತವಾಡ ಶಾಖಾ ಕಚೇರಿ ಎದುರು ವಿವಿಧ ಸಂಟನೆಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರಾದ ಎಚ್.ಜಿ.ಮಾದರ, ಎಚ್.ಎಸ್.ಚಲವಾದಿ, ಎನ್.ಬಿ.ಬಿಸನಾಳ, ಪರಸಪ್ಪ ಬಂಗಾರಗುಂಡ, ಮಾಂತಯ್ಯ ಮಠ, ಭೀಮಪ್ಪ ವಾಲಿಕಾರ, ಸಿ.ಕೆ.ಪಾಟೀಲ, ಹಣಮಂತ ಒಳಕಲದಿನ್ನಿ, ಹಣಮಂತ ಮುರಾಳ, ಪರಮೇಶ ದೊಡ್ಡಮನಿ, ಸಂಗನಗೌಡ ಸಿದರಡ್ಡಿ, ಬಾಬು ಚಲವಾದಿ, ಯಮನಪ್ಪ ಗಡ್ಡಿ ಇತರರಿದ್ದರು. ಮನವಿಯ ಪ್ರತಿಗಳನ್ನು ಜಿಲ್ಲಾಧಿಕಾರಿ, ಹೆಸ್ಕಾಂ ಎಸ್ಒ, ಹೆಸ್ಕಾಂ ಇಇ, ತಹಸೀಲ್ದಾರ್ ಅವರಿಗೂ ಕಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.