ಜಿಲ್ಲೆ

ಮುಂಡರಗಿ ಬಂದ್ ಇಂದು, ವಹಿವಾಟು ಸ್ತಬ್ಧ ಸಾಧ್ಯತೆ

ಮುಂಡರಗಿ: ಮುಂಡರಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಸೆ.25ರಂದು ವಿವಿಧ ಸಂಘಟನೆಗಳು ಮುಂಡರಗಿ ಬಂದ್‌ಗೆ ಕರೆ ನೀಡಿವೆ. ಇದರಿಂದ ವ್ಯಾಪಾರ-ವಹಿವಾಟು ಬಹುತೇಕ ಬಂದಾಗಲಿದ್ದು ಪಟ್ಟಣವು ಸ್ತಬ್ಧವಾಗಲಿದೆ.

ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಕಿಸಾನ್ ಜಾಗೃತಿ ವಿಕಾಸ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಮುಂಡರಗಿ ಬಂದ್ ಪ್ರತಿಭಟನೆ ಕೈಗೊಂಡಿದ್ದು, ಎಪಿಎಂಸಿ ವರ್ತಕರ ಸಂಘ, ವ್ಯಾಪಾರಸ್ಥರ ಸಂಘ ಬೆಂಬಲ ನೀಡಿದ್ದರಿಂದ ಪಟ್ಟಣ ಸಂಪೂರ್ಣ ಬಂದಾಗಲಿದೆ. ಆಸ್ಪತ್ರೆ, ಔಷಧದ ಅಂಗಡಿ, ತುರ್ತು ಸೇವೆ ಹೊರತುಪಡಿಸಿ ತರಕಾರಿ ಮಾರುಕಟ್ಟೆ, ಹಣ್ಣು, ಹೂವು ವ್ಯಾಪಾರ, ಸಂಚಾರ ಬಂದ್ ಆಗಲಿವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ಥವಾಗಲಿದೆ.
ಶಾಲಾ, ಕಾಲೇಜ್, ಬಸ್ ಸಂಚಾರ ಎಂದಿನಂತೆ ಇರಲಿದೆ. ಆದರೂ ಗ್ರಾಮೀಣ ಭಾಗ ಸೇರಿ ಬೇರೆ ತಾಲೂಕು, ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.

ರಾಜ್ಯ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಗದಗ ಜಿಲ್ಲೆಯಲ್ಲಿ ಮುಂಡರಗಿ ತಾಲೂಕು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂಡರಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆ ಬಾರದೆ ರೈತರು ತೊಂದರೆಯಲ್ಲಿದ್ದಾರೆ. ಹೀಗಾಗಿ ಮುಂಡರಗಿ ತಾಲೂಕನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದ ಕಾರಣ ಆಕ್ರೋಶಗೊಂಡ ರೈತರು, ವಿವಿಧ ಸಂಘಟನೆಗಳು ಮುಂಡರಗಿ ಬಂದ್‌ಗೆ ಕರೆ ನೀಡಿವೆ.

ಬಂದ್ ಹಿನ್ನೆಲೆಯಲ್ಲಿ ಬಂದೋಬಸ್ತಿಗಾಗಿ ಪೊಲೀಸ್ ಇಲಾಖೆಯಿಂದ 1 ಡಿವೈಎಸ್ಪಿ, 2 ಸಿಪಿಐ, 4 ಪಿಎಸ್‌ಐ, 10 ಇಎಸ್‌ಐ, 50 ಪೊಲೀಸ್ ಸಿಬ್ಬಂದಿ, 2 ಡಿಆರ್ ವ್ಯಾನ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಬೆಳೆ ನಾಶದಿಂದ ಮೇವಿನ ಅಭಾವ
ಮುಂಗಾರು ಹಂಗಾಮಿನ ತಾಲೂಕಿನ ಪ್ರಮುಖ ಬೆಳೆಗಳಾದ ಗೋವಿನಜೋಳ, ಶೇಂಗಾ, ಸೂರ್ಯಕಾಂತಿ, ಹೆಸರು ಇತರೆ ಬೆಳೆ ಸೇರಿ ಒಟ್ಟು 47,620 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ 36,480 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ಸರಿಯಾದ ಸಮಯಕ್ಕೆ ಮಳೆ ಸುರಿಯದೆ ಬಿತ್ತನೆ ಮಾಡಿದ ಬೆಳೆಗೆ ತೇವಾಂಶ ಕೊರತೆಯಿಂದ ಬೆಳೆ ಕುಂಠಿತವಾಗಿ ಒಣಗುತ್ತಿವೆ. ಉತ್ತಮ ಬೆಳೆ ಬಾರದ ಕಾರಣ ರೈತರು ಗೋವಿನಜೋಳ, ಇತರೆ ಬೆಳೆಗಳನ್ನು ಹರಗಿ ನಾಶ ಪಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆ ಇದೆ.

ಮುಂಡರಗಿ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹಿಸಿ ಶಾಂತಿಯುತವಾಗಿ ಮುಂಡರಗಿ ಬಂದ್ ಮಾಡಲಾಗುತ್ತಿದೆ. ಎಲ್ಲ ವ್ಯಾಪಾರಸ್ಥರು ಬೆಂಬಲ ನೀಡುವ ವಿಶ್ವಾಸವಿದೆ. ಸರ್ವಪಕ್ಷಗಳು ಹಾಗೂ ಎಲ್ಲ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಮುಂಡರಗಿ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡುವುದು ನಮ್ಮ ಮುಖ್ಯ ಬೇಡಿಕೆ.-ವೈ.ಎನ್. ಗೌಡರ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ