ಹುಣಸೂರು ನಗರದ ಸಂವಿಧಾನ ವೃತ್ತದಲ್ಲಿ ಸಮಾನ ಮನಸ್ಕ ವೇದಿಕೆ ವತಿಯಿಂದ ಸಿಜೆಐ ಮೇಲೆ ಶೂ ಎಸೆದ ವಕೀಲರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜೆ.ಮಹದೇವ್, ಕೊಳಗಟ್ಟ ಕೃಷ್ಣ, ವೇಣುಕುಮಾರ್, ಮಹದೇವಮ್ಮ ಇತರರು ಇದ್ದರು. 
ಜಿಲ್ಲೆ

ವಕೀಲನ ಬಂಧನಕ್ಕೆ ಆಗ್ರಹ

ಹುಣಸೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದನ್ನು ಖಂಡಿಸಿ ದೇಶದ್ರೋಹಿ ಪ್ರಕರಣದಡಿಯಲ್ಲಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಹುಣಸೂರು ಪಟ್ಟಣದ ಸಂವಿಧಾನ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

ಗುರುವಾರ ಪ್ರತಿಭಟನಾನಿರತರು ಸಂವಿಧಾನಕ್ಕೆ ಅಪಮಾನ ಮಾಡಿದ ವಕೀಲನಿಗೆ ಧಿಕ್ಕಾರ ಕೂಗಿದರು. ಸೋಷಿಯಲ್ ಜಸ್ಟೀಸ್ ಫೋರಂ ಜಿಲ್ಲಾ ಅಧ್ಯಕ್ಷ ಜೆ.ಮಹದೇವ ಮಾತನಾಡಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ದಲಿತರೆಂಬುದನ್ನೇ ಗುರಿಯಾಗಿಸಿಕೊಂಡು ವಕೀಲರೊಬ್ಬರು ಅವರ ಮೇಲೆ ಶೂ ಎಸೆಯುವ ಮೂಲಕ ನಡೆಸಿದ ದಾಳಿ, ಪ್ರಜಾಪ್ರಭುತ್ವದ ಹಾಗೂ ಭಾರತ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಅತ್ಯಂತ ಹೀನಾಯವಾದುದು. ಈ ದಾಳಿ ಒಬ್ಬ ವ್ಯಕ್ತಿಯ ಮೇಲಾದ ದಾಳಿಯಲ್ಲ, ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ನಡೆದ ದಾಳಿಯಾಗಿದೆ. ಸಮಾನತೆಯನ್ನು ನಂಬುವ ಪ್ರತಿಯೊಬ್ಬ ನಾಗರಿಕನೂ ಇಂದು ನ್ಯಾಯಾಂಗದ ಪರವಾಗಿ ನಿಲ್ಲಬೇಕು ಎಂದರು.

ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯ ಕಾರ್ಯದರ್ಶಿ ಮುದಾಸಿರ್ ಮಾತನಾಡಿ, ಹಲ್ಲೆಯ ನಂತರದಲ್ಲಿ ದಾಳಿಕೋರನ ಮುಕ್ತ ಸಂದರ್ಶನಗಳು ಇನ್ನಷ್ಟು ತೀವ್ರ ಆತಂಕ ಉಂಟು ಮಾಡಿವೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಕೇಂದ್ರ ಸರ್ಕಾರ ಭಿನ್ನ ವರ್ತನೆ ತೋರುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ವರದರಾಜು, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, ಪ್ರಕಾಶ್ ಎಂ ಆರ್ ಹೊಸಳ್ಳಿ, ವೇಣುಕುಮಾರ್, ಜಿಲ್ಲಾ ಮಹಿಳಾ ಸಂಚಾಲಕಿ ಮಹದೇವಮ್ಮ, ರೇಣುಕಾ, ಸಿ.ಪುಟ್ಟಮಲ್ಲು, ಅಹಿಂದ ಅಧ್ಯಕ್ಷ ರೇವಿಡ್ ರತ್ನಪುರಿ, ಕಾಂತರಾಜ, ನಂಜುಂಡ. ಮುಜಾಮಿಲ್, ಅಜೀಜುಲ್ಲಾ ಇತರರು ಇದ್ದರು.