ಕೊಳ್ಳೇಗಾಲ: ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್ ಅವರ ಎಡಗೈ ಕತ್ತರಿಸಿದವರನ್ನು ಶೀಘ್ರ ಬಂಧಿಸಿ ಜೀವಾವಧಿ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿ ಗುರುವಾರ ಪಟ್ಟಣದ ಭೀಮನಗರದ ಪರಿಶಿಷ್ಟ ಜಾತಿ ಕಸಬಾ ಮನೆ ಯಜಮಾನರು ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.
ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿದ ಯಜಮಾನರು, ಸಿಎಂ ಸಿದ್ದರಾಮಯ್ಯ ಅವರಿಗೆ ಬರದಿರುವ ಮನವಿ ಪತ್ರವನ್ನು ಎಸಿಗೆ ನೀಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರ ವಿಧಾನಸಭೆಗೆ ಸೇರಿದ ಮಳಗಾಳು ಗ್ರಾಮದಲ್ಲಿ ಜು.21ರಂದು ರಾತ್ರಿ ರಸ್ತೆಯಲ್ಲಿ ಮಾತನಾಡುತ್ತಿದ್ದ ಅನೀಶ್‌ನೊಂದಿಗೆ ಜಗಳ ತೆಗೆದ ರೌಡಿ ಶೀಟರ್ ಹರ್ಷ ಅಲಿಯಾಸ್ ಕೈಮ ಎಂಬಾತ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಡಗೈ ಕತ್ತರಿಸಿದ್ದಾರೆ ಎಂದು ವಿವರಿಸಿದರು.
ಗಲಾಟೆ ಸಂದರ್ಭ ಅನೀಶ್ ಕುಟುಂಬದ ಲಕ್ಷ್ಮಣ್, ಗೋವಿಂದರಾಜು ಹಾಗೂ ಇತರ ಮಹಿಳೆಯರ ಮೇಲೆಯೂ ಗುಂಪು ಅಮಾನವಿಯವಾಗಿ ಹಲ್ಲೆ ಮಾಡಿದೆ. ಈ ಘಟನೆಯಿಂದ ಅನೀಶ್ ಮತ್ತು ಕುಟುಂಬ ಭಯದಲ್ಲಿದೆ. ಇಷ್ಟಾದರೂ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸದಿರುವುದು ಸರಿಯಲ್ಲ ಎಂದರು.
ಇನ್ನಾದರೂ ಪೊಲೀಸರು ಎಚ್ಚೆತ್ತು ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಜತೆಗೆ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕೊಳ್ಳೇಗಾಲದಿಂದ ಕನಕಪುರ ತಾಲೂಕಿಗೆ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭೀಮನಗರದ ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ, ಯಜಮಾನರಾದ ಎಂ.ಸಿದ್ದಾರ್ಥ, ಎಂ.ಪಾಪಣ್ಣ, ಕುಮಾರ್, ಎಸ್.ರಾಜಶೇಖರಮೂರ್ತಿ, ನಾಗೇಶ್, ಸನತ್‌ಕುಮಾರ್, ಶಿವಪ್ಪ ಇದ್ದರು.