ಶಾಸಕ ಗುರುರಾಜ್ ಗಂಟಿಹೊಳೆ  
ಜಿಲ್ಲೆ

ಗ್ರಾಮ ಕಾಯಕ ಮಿತ್ರರ ನೇಮಕಾತಿಗೆ ಒತ್ತಾಯ

ಗಂಗೊಳ್ಳಿ: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲಿ ್ಲ10 ಸಾವಿರಕ್ಕಿಂತ ಮೇಲ್ಪಟ್ಟು ಮಾನವ ದಿನ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಕಾಯಕ ಮಿತ್ರರ ನೇಮಕಾತಿ ಆಗದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ತೊಡಕಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಗ್ರಾಮ ಕಾಯಕ ಮಿತ್ರರ ನೇಮಕಾತಿ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 2020-21ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ 20 ಸಾವಿರ (ಕೊಡಗು, ಉಡುಪಿ, ಉತ್ತರ ಕನ್ನಡ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಗರ 10 ಸಾವಿರ)ಕ್ಕಿಂತ ಮೇಲ್ಪಟ್ಟು ಮಾನವ ದಿನಗಳ ಸೃಜನೆ ಮಾಡಿದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಯನ್ನು ಗೌರವಧನದ ಆಧಾರದ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿದೆ. ಅದರಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ, ಬೈಂದೂರು ತಾಲೂಕಿನ ಹೇರೂರು ಮತ್ತು ನಾಡ, ಕುಂದಾಪುರ ತಾಲೂಕಿನ ಕಂದಾವರ ಮತ್ತು ಗುಲ್ವಾಡಿ ಹೀಗೆ ಐದು ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗ್ರಾಮ ಕಾಯಕ ಮಿತ್ರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.

ಬೈಂದೂರು ವ್ಯಾಪ್ತಿಯ 11 ಗ್ರಾಪಂ ಸೇರಿದಂತೆ ಜಿಲ್ಲೆಯ 18 ಗ್ರಾಪಂಗಳಲ್ಲಿ ಗ್ರಾಮ ಕಾಯಕ ಮಿತ್ರರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ ಹಾಗೂ ಶೇ.6ರ ಆಡಳಿತ ವೆಚ್ಚದ ಮಿತಿಯಲ್ಲಿ ರಿಯಾಯಿತಿ ನೀಡುವಂತೆ ಕೋರಲಾಗಿತ್ತು. ಆದರೆ ಹೆಚ್ಚುವರಿ ನೇಮಕಾತಿ ಮಾಡಿಕೊಂಡರೆ ಆಡಳಿತಾತ್ಮಕ ವೆಚ್ಚ ಶೇ.6 ಮೀರುವುದಾಗಿ ಸ್ವತಃ ಉಡುಪಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೆಚ್ಚುವರಿ ಗ್ರಾಮ ಕಾಯಕರ ನೇಮಕಾತಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ ಹಾಗೂ ರಾಜ್ಯಾದ್ಯಂತ ಯೋಜನೆಯಡಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಕಾಯಕ ಮಿತ್ರರ ಮೌಲ್ಯಮಾಪನ ಕೈಗೊಳ್ಳುವ ಕುರಿತು ಜಿಲ್ಲಾ ಪಂಚಾಯತಿಗಳಿಗೆ ತಿಳಿಸಿದ್ದು, ಹೊಸದಾಗಿ ಜಿಲ್ಲೆಗಳಲ್ಲಿ ಗ್ರಾಮ ಕಾಯಕ ಮಿತ್ರ ನೇಮಕಾತಿ ಕೈಗೊಳ್ಳುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ನೇಮಿಸುವ ಕುರಿತು ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.