ಚಿಕ್ಕಬಳ್ಳಾಪುರ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ವೈ.ಆರ್.ಸದಾಶಿವರೆಡ್ಡಿ ಮೇಲಿನ ಹಲ್ಲೆಯನ್ನು ಖಂಡಿಸಿ ವಕೀಲರ ಸಂಘ ಸೋಮವಾರ ಪ್ರತಿಭಟಿಸಿತು.
ಜಿಲ್ಲಾಡಳಿತ ಭವನಕ್ಕೆ ತೆರಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇಬ್ಬರು ಕಚೇರಿಗೆ ಏಕಾಏಕಿ ನುಗ್ಗಿ ೈಬರ್ ರಾಡ್‌ನಿಂದ ಸದಾಶಿವರೆಡ್ಡಿ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇತ್ತೀಚೆಗೆ ಕಾನೂನು ಭಯವಿಲ್ಲದೇ ವಕೀಲರ ಮೇಲೆ ಹಲ್ಲೆ ನಡೆಸುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ಮೂಲಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಅಭಿಲಾಷ್, ಉಪಾಧ್ಯಕ್ಷ ಎಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಖಜಾಂಚಿ ಆಯೂಬ್ ಖಾನ್, ಹಿರಿಯ ವಕೀಲ ಪಿ.ಸುಬ್ರಮಣಿ ಮತ್ತಿತರರು ಭಾಗವಹಿಸಿದ್ದರು.