ರಾಯಚೂರು ಜಿಲ್ಲೆಯ ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆ ಪ್ರಾಂಶುಪಾಲ ಸುರೇಶ ವರ್ಮಾ ಇವರನ್ನು ಸೇವೆಯಿಂದ ಅಮಾನತು ಮಾಡಲು ಒತ್ತಾಯಿಸಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಡಿಸಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಹಸೀಪ್‌ಗೆ ಮನವಿ ಸಲ್ಲಿಸಿದರು.
ಕೊತ್ತದೊಡ್ಡ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳನ್ನು ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೊ ಚಿತ್ರೀಕರಣ ಮಾಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಸುರೇಶ ವರ್ಮಾ ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹೀಗಾದರೆ ಪತ್ರಕರ್ತರು ಸಮಾಜದಲ್ಲಿ ಸ್ವತಂತ್ರವಾಗಿ ವರದಿಗಾರಿಕೆ ಮಾಡುವುದು ಹೇಗೆ ಸಾಧ್ಯವಾಗುತ್ತದೆ. ಇಂತಹ ಬೇಜವಬ್ದಾರಿಯುತ ಅಧಿಕಾರಿಗಳಿಂದ ಪತ್ರಕರ್ತರ ಮೇಲೆ ನಿರಂತರ ಅಪಮಾನಗಳು ನಡೆಯುತ್ತಿವೆ. ಇದರಿಂದ ಪತ್ರಕರ್ತರು ಮಾನಸಿಕವಾಗಿ ನೊಂದಿದ್ದಾರೆ. ಇಡೀ ಮಾಧ್ಯಮ ಕ್ಷೇತ್ರವನ್ನು ಮನಬಂದಂತೆ ಹೀಯಾಳಿಸಿ, ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಪತ್ರಕರ್ತರೊಂದಿಗೆ ಶಾಲೆಯ ಪ್ರಿನ್ಸಿಪಾಲನನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ವೀರಭದ್ರಪ್ಪ ಜವಳಗೇರಾ, ಪತ್ರಕರ್ತರಾದ ಜಿ.ವೀರಾರೆಡ್ಡಿ, ಬಸವರಾಜ ನಾಗಡದಿನ್ನಿ, ಭೀಮಸೇನಚಾರ್ಯ, ಮಲ್ಲಿಕಾರ್ಜುನಯ್ಯ, ಬಸವರಾಜ ಭೋಗಾವತಿ ವಿಜಯಕುಮಾರ ಜಾಟಗಲ್, ವೆಂಕಟೇಶ ಹೂಗಾರ, ಎಚ್.ವೀರನಗೌಡ, ಸುರೇಶರೆಡ್ಡಿ ಸೇರಿ ಹಿರಿಯ ಮತ್ತು ಕಿರಿಯ ವರದಿಗಾರರು ಇದ್ದರು.