ಪಟ್ಟಣದ ಟೌನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿ ಎದುರು ಜಮಾಯಿಸಿದ ವಿವಿಧ ಹಿಂದು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಿ ಕೋಮು ಗಲಭೆ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದುಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಜಮಾಯಿಸಿದ ವಿವಿಧ ಹಿಂದುಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯದ ಹಿಂದುಗಳ ಮೇಲೆ ಗಲಭೆ ನಡೆಸಲು ಮತ್ತೊಂದು ಕೋಮಿಗೆ ಸರ್ಕಾರವೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಡಿವೈಎಸ್ಪಿ ಕಚೇರಿ ವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಚೇರಿ ಎದುರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಚಂದನ್ ಮಾತನಾಡಿ, ಕಲ್ಲು ತೂರಿರುವ ಗಲಭೆಕೋರರಿಗೆ ಲಾಠಿ ರುಚಿ ತೋರಿಸಬೇಕಾಗಿದ್ದ ಪೋಲೀಸರು ನ್ಯಾಯ ಕೇಳಲು ಬಂದಿದ್ದ ಪ್ರತಿಭಟನಾನಿರತ ಹಿಂದು ಕಾರ್ಯಕರ್ತರು ಹಾಗೂ ಮಹಿಳೆಯರು, ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಯಾವ ನ್ಯಾಯ? ಗಣೇಶನನ್ನು ಕೂರಿಸುವುದು, ಪೂಜಿಸುವುದು, ಮೆರವಣಿಗೆ ಮೂಲಕ ವಿಸರ್ಜಿಸುವುದು ನಮ್ಮ ಹಿಂದು ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿರುವ ಸಾಂಪ್ರದಾಯ. ಇದೀಗ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಹಿಂದು ಆಚರಣೆಗಳನ್ನು ಹತ್ತಿಕ್ಕಲು ಮುಂದಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ವಕೀಲ ಕೆ.ಬಾಲರಾಜ್ ಮಾತನಾಡಿ, ಕೆರಗೋಡು ಆಯ್ತು, ನಾಗಮಂಗಲ ಆಯ್ತು ಇದೀಗ ಮದ್ದೂರಿನಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೇವಲ ವೋಟ್ ಬ್ಯಾಂಕ್ ಗಾಗಿ ಮುಸ್ಲೀಮರ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಹಿಂದು ಮತ್ತು ಹಿಂದುತ್ವದ ಅಸ್ಮಿತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಇಂತಹ ಅಸಮರ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ರೈತನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಲ್ಲು ಎಸೆದ ಗಲಭೆಕೋರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂದೆ ಆಗುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರ ಮೂಲಕ ತಮ್ಮ ಬೇಡಿಕೆಗಳಿರುವ ಮನವಿ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಅವರಿಗೆ ಸಲ್ಲಿಸಿದರು.

ಪುರಸಭೆ ಸದಸ್ಯ ಶ್ರೀನಿವಾಸ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುನೀಲ್, ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ಹರ್ಷ, ನಗರ ಸಂಚಾಲಕ ಮದನ್, ಭಜರಂಗದಳ ತಾಲೂಕು ಸಂಚಾಲಕ ಶಂಕರ, ಯುವ ಬ್ರಿಗೆಡ್ ಸಂಯೋಜಕ ರಂಜನ್, ಮುಖಂಡರಾದ ಉಮೇಶ್ ಕುಮಾರ್, ಬಿ.ಸಿ.ಕೃಷ್ಣೇಗೌಡ, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಬಿಜೆಪಿ ಮುಖಂಡ ಸುನೀಲ್, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಸನತ್, ಪ್ರೇಮ್ ಕುಲಾಲ್, ಕಿರಣ್, ರಾಕೇಶ್, ರಾಘು ಇತರರು ಈ ವೇಳೆ ಭಾಗಿಯಾಗಿದ್ದರು.