ಜಿಲ್ಲೆ

ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಪ್ರಸಿನ್ ಕೆ.ಆರ್

ಅರಕಲಗೂಡು: ಬೆಂಗಳೂರಿನ ವೀರಭದ್ರನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆಗೆ ಅಪಮಾನಗೊಳಿಸಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಮುದಾಯದ ಮುಖಂಡರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯನ್ನು ಜೀವಂತವಾಗಿರಿಸಿ ಎಲ್ಲ ವರ್ಗದ ಸಾವಿರಾರು ಮಕ್ಕಳಿಗೆ ಅನ್ನದಾಸೋಹ, ವಿದ್ಯೆ ನೀಡಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಶ್ರೀಗಳಿಗೆ ಅಪಮಾನವೆಸಗಿರುವುದು ನೋವಿನ ಸಂಗತಿ. ಮನುಕುಲದ ಏಳಿಗೆಗೆ ಶ್ರಮಿಸಿದ ಸಂತರಿಗೆ ಮಾಡಿರುವ ಅವಮಾನವಿದು ಎಂದು ಖಂಡಿಸಿದರು.

ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಸಮಾಜದ ಉನ್ನತಿಗೆ ತಮ್ಮ ಬದುಕು ಮುಡುಪಾಗಿಟ್ಟ ಸಂತರಿಗೆ ಈ ರೀತಿಯ ಅಪಮಾನಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಆರೋಪಿಗೆ ತಕ್ಕ ಶಿಕ್ಷೆ ನೀಡಿ ಇಂತ ಹೀನ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸೌಮ್ಯಾ ಅವರಿಗೆ ಮನವಿ ಸಲ್ಲಿಸಿದರು. ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಎಂ. ಸುರೇಶ್, ತಾಲೂಕು ಕಾರ್ಯದರ್ಶಿ ಶಿವಣ್ಣ, ಯುವ ಘಟಕದ ಚಂದು, ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ ಯೋಗೇಶ್, ತಾಲೂಕು ಘಟಕದ ನಿರ್ದೇಶಕ ಸುಂದರೇಶ್, ವಕೀಲ ವೇದಮೂರ್ತಿ, ಮುಖಂಡರಾದ ದಡದಹಳ್ಳಿ ಜಗದೀಶ್, ಟಿ.ಮಲ್ಲೇಶ್, ವಿರೂಪಾಕ್ಷ, ಪಂಚಾಕ್ಷರಿ, ಲೋಕೇಶ್, ಮೋಕಲಿ ಆನಂದ, ಚಂದ್ರಣ್ಣ, ಬೋಜಪ್ಪ, ರುದ್ರಪ್ಪ, ಶಶಿಕುಮಾರ್, ಮಂಜುನಾಥ್, ರಘು ಇತರರು ಇದ್ದರು.