ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ತಗ್ಗುಗಳು ಬಿದ್ದಿರುವುದು. 
ಜಿಲ್ಲೆ

ಹದಗೆಟ್ಟ ರಸ್ತೆಯಿಂದ ಪರದಾಟ

ಶ್ರೀನಾಥ

ಕೂಡ್ಲಿಗಿ: ಪಟ್ಟಣದ ಸಂಡೂರು ರಸ್ತೆಯ ಡಾಂಬರ್ ಕಿತ್ತುಹೋಗಿ ಗುಂಡಿಗಳು ಬಿದ್ದು ದುರಸ್ತಿಯಾಗದೆ, ವಿಸ್ತರಣೆಯೂ ಆಗದೆ ವಾಹನ ಸವಾರರು ಪರದಾಡುವಂತಾಗಿದೆ.

ಜನಸಂದಣಿ ಹೆಚ್ಚಿರುವ ಈ ರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಹಾಗೂ ರೇಷ್ಮೆ ಇಲಾಖೆ ಕಚೇರಿಗಳು ಸೇರಿದಂತೆ ಶಾಲಾ-ಕಾಲೇಜುಗಳು, ವಸತಿ ನಿಲಯಗಳು ಇವೆ.

ಅಲ್ಲದೆ ಸಂಡೂರು, ತೋರಣಗಲ್ಲು ಹಾಗೂ ಬಳ್ಳಾರಿಗೆ ಈರಸ್ತೆ ಮೂಲಕವೇ ವಾಹನಗಳು ಸಂಚರಿಸುತ್ತವೆ. ನಿತ್ಯ ನೂರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ, ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು-ಗುಂಡಿಗಳು ವಾಹನ ಸವಾರರು ಮತ್ತು ಪಾದಚಾರಿಗಳನ್ನು ಆತಂಕಪಡಿಸುತ್ತಿವೆ.

ರಸ್ತೆ ವೀರಭದ್ರೇಶ್ವರ ಚಿತ್ರ ಮಂದಿರದ ಮುಂಭಾಗದಲ್ಲಿ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ನೀರು ನಿಂತು ಕೆರೆಯಂತಾಗುತ್ತದೆ. ಎರಡು ವರ್ಷಗಳಿಂದಲೂ ಇದೇ ಸ್ಥಿತಿಯಲ್ಲಿರುವ ರಸ್ತೆಯ ಹೊಂಡಗಳನ್ನು ಮುಚ್ಚಲು ತೇಪೆಯಂತೆ ಮಣ್ಣು ಹಾಕಲಾಗಿದೆ.

ಆದರೆ, ಮಳೆ ಬಂದಾಗ ಕೆಸರುಮಯವಾಗಿ ಸಂಚಾರಕ್ಕೆ ಸಮಸ್ಯೆ ಮಾಡುತ್ತಿದೆ. ವಾಹನಗಳು ಬಂದಾಗ ಸಿಡಿಯುವ ಕೆಸರಿನಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು, ಪಾದಚಾರಿಗಳು ಹರಸಾಹಸ ಪಡಬೇಕು. ಇದರಿಂದ ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ.

ಬಾಲಕರ ಸರ್ಕಾರಿ ವಸತಿ ನಿಲಯದ ಬಳಿ ರಸ್ತೆ ಅಗೆದು ಪೈಪ್‌ಲೈನ್ ಹಾಕಲಾಗಿದೆ. ಇದರ ಮಣ್ಣೆಲ್ಲ ಕಿತ್ತು ಹೋಗಿ ಕಂದಕ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಚಾಲಕರು ರಸ್ತೆಯ ಬದಿಗೆ ಸಂಚರಿಸುವುದರಿಂದ ಅಲ್ಲಿಯೂ ಹದಗೆಟ್ಟಿದೆ.

ಕೆಕೆಆರ್‌ಟಿಸಿ ಬಸ್ ನಿಲ್ದಾಣ, ಡಿಪೋದ ಮುಂದೆಯೂ ನೀರು ಹರಿದು, ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ಕೊರಕಲಾಗಿದೆ. ಇದರಿಂದ ಚಲಿಸುವ ವಾಹನಗಳನ್ನು ರಸ್ತೆಯಿಂದ ಕೆಳಗಿಳಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಈ ರಸ್ತೆಯು ದುರಸ್ತಿ ಕಂಡಿಲ್ಲ.

ವಿಸ್ತರಣೆ ಕಾರ್ಯ ಯಾವಾಗ ?

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಾಲಕರ ವಸತಿ ನಿಲಯದವರಗೆ ರಸ್ತೆಯನ್ನು ಚತುಷ್ಪಥವನ್ನಾಗಿ ಮಾಡಲಾಗುವುದು ಎಂದು ಶಾಸಕರು, ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ, ಯಾವಾಗ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಅಲ್ಲದೆ, ದೊಡ್ಡ ಪ್ರಮಾಣದ ಅವಘಡಗಳು ಸಂಭವಿಸುವ ಮುನ್ನ ರಸ್ತೆಯನ್ನು ದುರಸ್ತಿಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

=======

ಈಗಾಗಲೇ ಸಂಡೂರು ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಿ ಆರು ಕೋಟಿ ರೂ. ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಶೀಘ್ರದಲ್ಲೇ ರಸ್ತೆ ವಿಸ್ತರಣೆ ಮಾಡಿ ಸುಸಜ್ಜಿತ ರಸ್ತೆ, ಪಾದಚಾರಿ ಮಾರ್ಗ ಹಾಗೂ ವಿಭಜಕದಲ್ಲಿ ವಿದ್ಯುತ್ ದೀಪ ಅಳವಡಿಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.

> ಡಾ.ಎನ್.ಟಿ.ಶ್ರೀನಿವಾಸ್, ಶಾಸಕ, ಕೂಡ್ಲಿಗಿ

=======

ಪಟ್ಟಣದ ಸಂಡೂರು ರಸ್ತೆ ಬಹುದಿನಗಳಿಂದ ಹದಗೆಟ್ಟಿದೆ. ರಸ್ತೆಯಲ್ಲಿ ಸಂಚರಿಸುವಾಗ ಹಲವರು ಬಿದ್ದು ಗಾಯಗೊಂಡಿದ್ದಾರೆ. ಶೀಘ್ರವೇ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಲಿ.

> ರಾಮು ಸಾ ಕಾಟ್ವಾ, ಕೂಡ್ಲಿಗಿ ನಿವಾಸಿ