28ಕೆಕೆಆರ್3 ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ ಗ್ರಾಮದ ಸೇತುವೆ ನಿರ್ಮಾಣಕ್ಕೆ ಶುಕ್ರವಾರ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು. ಎಇಇ ಚಂದ್ರೇಗೌಡ, ಶ್ರೀಧರ್, ಕಾಳೇಗೌಡ, ಬಾಲರಾಜ್, ಪ್ರಶಾಂತ್, ನಾಗೇಗೌಡ, ಲಕ್ಷ್ಮಣಗೌಡ, ರಾಮೇಗೌಡ, ಗಣೇಶ್‌ಗೌಡ, ಚಂದ್ರು, ಪುಟ್ಟಸ್ವಾಮಿ, ಸಂತೋಷ್ ಇದ್ದರು.  
ಜಿಲ್ಲೆ

ಮಾದಿಹಳ್ಳಿ ಸೇತುವೆ ದುರಸ್ತಿಗೆ ಆಗ್ರಹ

ಕಿಕ್ಕೇರಿ: ಹೋಬಳಿಗೆ ಸಂಕರ್ಪ ಬೆಸೆಯುವ ಮಾದಿಹಳ್ಳಿ ಗ್ರಾಮದ ಸೇತುವೆ ದುರಸ್ತಿಗಾಗಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಸುಮಾರು 3 ವರ್ಷಗಳ ಹಿಂದೆ ಕುಂಭದ್ರೋಣ ಮಳೆಯಿಂದ ಮಾದಿಹಳ್ಳಿ ಸೇತುವೆ ಕುಸಿದಿತ್ತು. ಸೇತುವೆ ಸಮೀಪದ ಸಾಕಷ್ಟು ರೈತರ ಜಮೀನು ಹಾಳಾಗಿತ್ತು. ಸೇತುವೆ ಬಳಿ ಮಣ್ಣಿನ ಕೊರಕಲಾಗಿ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಪರಿಣಾಮ ಮಾದಿಹಳ್ಳಿ ಸೇತುವೆ ಜಲದಿಗ್ಭಂಧನವಾಗಿ ಗ್ರಾಮದಿಂದ ಹೋಬಳಿ ಕೇಂದ್ರಕ್ಕೆ ಬರದಂತಾಗಿತ್ತು. ಐದಾರು ಕಿ.ಮೀ. ಸುತ್ತಾಡಿಕೊಂಡು ಬರುವಂತಹ ಸಂದಿಗ್ಧತೆ ಕಾಡಿತ್ತು. ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಎಡತಾಕಿ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಕಾಮಗಾರಿ ಆರಂಭವಾಗದ ಕಾರಣ ರೈತರು ಶುಕ್ರವಾರ ಅಧಿಕಾರಿಗಳ ಮುಂದೆ ಪ್ರತಿಭಟನೆಗೆ ಮುಂದಾದರು.


ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ರೈತಾಪಿ ಜನತೆ ಏರು ಧ್ವನಿಯಲ್ಲಿ ಆಗ್ರಹಿಸಿರು.
ಗ್ರಾಪಂ. ಸದಸ್ಯ ಶ್ರೀೀಧರ್ ಮಾತನಾಡಿ, ಎರಡೂವರೇ ವರ್ಷಗಳ ಹಿಂದೆ ಸೇತುವೆ ನಿರ್ಮಾಣಕ್ಕೆ 2.5 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಟೆಂಡರ್ ಕೂಡ ಕರೆಯಲಾಗಿತ್ತು. ಇನ್ನೇನೂ ಕಾಮಗಾರಿ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಚುನಾವಣೆ ಬಂದಿತು. ತದನಂತರ ಈ ಅನುದಾನ ತಡೆ ಹಿಡಿಯಲಾಗಿದೆ. ಪರಿಣಾಮ ನಿತ್ಯ ಶಾಲಾ- ಕಾಲೇಜು ಮಕ್ಕಳು, ವಯೋವೃದ್ಧರು ತೆರಳಲು, ರೈತರು ಹಾಳಾದ, ಕುಸಿದ ಸೇತುವೆಯಿಂದ ಗ್ರಾಮದಿಂದ ಹೊರಹೋಗದಂತಾಗಿದೆ. ನಿತ್ಯ ಜಾನುವಾರುಗಳಿಗೆ ಮೇವು ತರಲು, ಕೃಷಿ ಉತ್ಪನ್ನ ಸಾಗಿಸಲು ದೊಡ್ಡ ಸಮಸ್ಯೆಯಾಗಿದೆ. ನಾಲ್ಕೈದು ಕಿ.ಮೀ. ಸುತ್ತಿ ಬಳಸಿ ಗ್ರಾಮದಿಂದ ಹೊರಬೇಕಾದ ಸ್ಥಿತಿ ಇದೆ. ಮಳೆಗಾಲವಾಗಿದ್ದು ತಮ್ಮ ಸ್ಥಿತಿ ಕೇಳುವವರಿಲ್ಲವಾಗಿದೆ. ಖಾಸಗಿ ವಾಹನಗಳಿಗೆ ಹಣ ನೀಡಿದರೂ ಗ್ರಾಮಕ್ಕೆ ಬರದಾಗಿವೆ. ರಾತ್ರಿ ವೇಳೆ ಗ್ರಾಮಕ್ಕೆ ತಲುಪಲು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಇಇ ಚಂದ್ರೇಗೌಡ ಮಾತನಾಡಿ, ಗ್ರಾಮಸ್ಥರ ಸಮಸ್ಯೆ ಅರಿತಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸಲು ಮೇಲಧಿಕಾರಿಗಳಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾಳೇಗೌಡ, ಬಾಲರಾಜ್, ಪ್ರಶಾಂತ್, ನಾಗೇಗೌಡ, ಲಕ್ಷ್ಮಣಗೌಡ, ರಾಮೇಗೌಡ, ಗಣೇಶ್‌ಗೌಡ, ಚಂದ್ರು, ಪುಟ್ಟಸ್ವಾಮಿ, ಸಂತೋಷ್ ಇದ್ದರು.