ಗುಂಡ್ಲುಪೇಟೆ, ರೈತರ ಚಿನ್ನದ ಮೇಲಿನ ಸಾಲ, ನವೀಕರಣಕ್ಕೆ ಒತ್ತಾಯ, ಪ್ರತಿಭಟನೆ
ಗುಂಡ್ಲುಪೇಟೆ: ಬ್ಯಾಂಕುಗಳು ರೈತರ ಚಿನ್ನದ ಮೇಲಿನ ಸಾಲವನ್ನು ನವೀಕರಣ ಮಾಡಬೇಕು ಎಂದು ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆ ಪಟ್ಟಣದ ಕೆನರಾ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬ್ಯಾಂಕ್ ಎದುರು ರೈತರು ಜಮಾಯಿಸಿದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಆದರೆ ಸಕಾಲದಲ್ಲಿ ಮಳೆಬೀಳದೆ ಬೆಳೆಗಳೂ ಕೈಹತ್ತದಂತಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರಕದೆ ತುಂಬ ನಷ್ಟವುಂಟಾಗಿದ್ದರೂ ಬ್ಯಾಂಕುಗಳು ಚಿನ್ನದ ಮೇಲೆ ಪಡೆದ ಸಾಲವನ್ನು ಸಂಪೂರ್ಣ ಪಾವತಿಸುವಂತೆ ಒತ್ತಾಯಿಸುತ್ತಿವೆ. ಆದರೆ ನಾನಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರೈತರು ಅಷ್ಟು ಹಣ ಹೊಂದಿಸಲು ಆಗುತ್ತಿಲ್ಲ. ಆದ್ದರಿಂದ ಹಿಂದಿನಂತೆಯೇ ಚಿನ್ನದ ಮೇಲಿನ ಸಾಲವನ್ನು ನವೀಕರಣ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ವ್ಯವಸ್ಥಾಪಕ ಅಶುತೋಷ್ ಮಿಶ್ರಾ ಮಾತನಾಡಿ ನಬಾರ್ಡ್ ನಿಯಮದಂತೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು. ಬ್ಯಾಂಕುಗಳು ತಮ್ಮ ನಿಯಮ ನಿಬಂಧನೆಗಳು ಬದಲಾದರೆ ಕನ್ನಡದಲ್ಲಿ ನೊಟೀಸ್ ನೀಡುವ ಮೂಲಕ ರೈತರಿಗೆ ತಿಳಿವಳಿಕೆ ಮೂಡಿಸಬೇಕು. ಆದರೆ ಬಡ್ಡಿಕಟ್ಟಲು ಬಂದಾಗ ತಿಳಿಸುತ್ತಿದ್ದಾರೆ. ಇನ್ನಾದರೂ ಕನ್ನಡದಲ್ಲಿ ಸೂಚನೆ ನೀಡುವ ಬೋರ್ಡ್ ಅಳವಡಿಸಿ ಬಡ್ಡಿ ಕಟ್ಟಿಸಿಕೊಂಡು ರಿನೀವಲ್ ಮಾಡಬೇಕು. ತಪ್ಪಿದರೆ ಸೆ.16ರಂದು ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ಬಿಗಿ ಬಂದೋಬಸ್ತ್ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಮಾರಶೆಟ್ಟಿ, ಮಹೇಶ್, ಲೋಕೇಶ್ ಹಾಗೂ ಇತರರು ಇದ್ದರು.